ಬಿಲ್ಡರ್‌ಗಳಿಗೆ ಎಚ್ಚರಿಕೆ: ಕೇಂದ್ರದಿಂದ ಹೊಸ ಕಾನೂನು, ಯೋಜನೆ ತಡ ಮಾಡಿದರೆ ಬಡ್ಡಿ

Update: 2016-10-30 02:54 GMT

ಹೊಸದಿಲ್ಲಿ, ಅ.30: ಬಹುನಿರೀಕಿತ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯ ನಿಯಮಾವಳಿಗಳ ಸಂಬಂಧ ಸೋಮವಾರ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಇದರನ್ವಯ ಬಿಲ್ಡರ್‌ಗಳ ನಿರ್ಮಾಣ ಯೋಜನೆ, ನಿಗದಿತ ಅವಧಿಯನ್ನು ಮೀರಿ ವಿಳಂಬವಾದರೆ ಗ್ರಾಹಕರಿಗೆ ಶೇ.12ರ ದರದಲ್ಲಿ ಬಡ್ಡಿ ಪಾವತಿಸಬೇಕಾಗುತ್ತದೆ.

ಮೊದಲು ಈ ನಿಯಮಾವಳಿಯನ್ನು ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ಅಂಡಮಾನ್ ಮತ್ತು ನಿಕೋಬಾರ್, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರ ಹವೇಲಿ ಹಾಗೂ ಲಕ್ಷದ್ವೀಪದಲ್ಲಿ ಜಾರಿಗೆ ತರಲಾಗುತ್ತದೆ. ತಿಂಗಳ ಬಳಿಕ ದಿಲ್ಲಿಯಲ್ಲೂ ಜಾರಿಗೆ ಬರಲಿದೆ ಎಂದು ನಗರಾಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಹರ್ಯಾಣ, ಗುಜರಾತ್, ಪಂಜಾಬ್ ಮತ್ತು ಗೋವಾ ಕೂಡಾ ಶೀಘ್ರವೇ ನಿಯಮಾವಳಿಯನ್ನು ರೂಪಿಸುವ ಸಾಧ್ಯತೆ ಇದೆ. ವಿಧಾನಸಭಾ ಚುನಾವಣೆ ಸಮೀಪದಲ್ಲಿರುವ ಉತ್ತರ ಪ್ರದೇಶದಲ್ಲಿ ನೀತಿಸಂಹಿತೆಯಿಂದ ತಪ್ಪಿಸಿಕೊಳ್ಳಲು ಅತಿಶೀಘ್ರದಲ್ಲೇ ಜಾರಿಗೆ ತರುವ ಸಾಧ್ಯತೆ ಇದೆ.

ಈ ಅಧಿಸೂಚನೆಯನ್ವಯ ರಿಯಲ್ ಎಸ್ಟೇಟ್ ವಲಯಕ್ಕೆ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಲು ಉದ್ದೇಶಿಸಲಾಗಿದೆ. ಕೆಲ ಪ್ರಕರಣಗಳಲ್ಲಿ ಬಿಲ್ಡರ್‌ಗಳು 10 ವರ್ಷಕ್ಕಿಂತಲೂ ಅಧಿಕ ಅವಧಿಯನ್ನು ನಿರ್ಮಾಣಕ್ಕೆ ತೆಗೆದುಕೊಳ್ಳುತ್ತಿರುವುದು ಮನೆ ಗ್ರಾಹಕರಿಗೆ ನುಂಗಲಾರದ ತುತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೊಸ ಕಾಯ್ದೆ ವರದಾನವಾಗಲಿದೆ. ಬೇಡಿಕೆ ಕುಸಿತದಿಂದ ಕಂಗೆಟ್ಟಿರುವ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಈ ಹೊಸ ಕ್ರಮದಿಂದ ಗ್ರಾಹಕ ವಿಶ್ವಾಸ ಬೆಳೆಯುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News