×
Ad

3,000ಕೋ.ರೂ.ಮೌಲ್ಯದ ಮಾದಕದ್ರವ್ಯ ವಶ ,ಬಾಲಿವುಡ್ ನಿರ್ಮಾಪಕನ ಬಂಧನ

Update: 2016-11-02 15:31 IST

ಹೊಸದಿಲ್ಲಿ,ನ.2: ರಾಜಸ್ಥಾನದ ಉದಯಪುರದ ಫ್ಯಾಕ್ಟರಿಯೊಂದರಿಂದ 3,000 ಕೋ.ರೂ.ಗೂ ಅಧಿಕ ಮೌಲ್ಯದ ಮಾದಕದ್ರವ್ಯಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ವು ವಶಪಡಿಸಿಕೊಂಡಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾದಕದ್ರವ್ಯ ವಶವಾಗಿರುವುದು ದೇಶದಲ್ಲಿ ಇದೇ ಮೊದಲ ಬಾರಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಚಿತ್ರ ನಿರ್ಮಾಪಕ ಸುಭಾಷ್ ದುಧನಿಯನ್ನು ಬಂಧಿಸಲಾಗಿದೆ.

ಅ.28ರಂದು ಉದಯಪುರದ ಮರುಧರ ಡ್ರಿಂಕ್ಸ್ ಫ್ಯಾಕ್ಟರಿಯ ಮೇಲೆ ದಾಳಿ ನಡೆಸಿದ ಡಿಆರ್‌ಐ ಅಧಿಕಾರಿಗಳು ಅಲ್ಲಿಯ ಕೋಣೆಯೊಂದರಲ್ಲಿ ರಟ್ಟಿನ ಪೆಟ್ಟಿಗೆಗಳಲ್ಲಿ ತುಂಬಿಸಿಟ್ಟಿದ್ದ ನಿಷೇಧಿತ ಮ್ಯಾಂಡ್ರೆಕ್ಸ್ ಮಾತ್ರೆಗಳನ್ನು ಕಂಡು ಬೆಕ್ಕಸಬೆರಗಾಗಿದ್ದರು. ಒಟ್ಟೂ ಸುಮಾರು 23.5 ಮೆ.ಟನ್ ತೂಕದ ಎರಡು ಕೋಟಿ ಮಾತ್ರೆಗಳು ಅಲ್ಲಿ ಪತ್ತೆಯಾಗಿದ್ದವು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ನಿಷೇಧಿತ ಮಾತ್ರೆಗಳ ವೌಲ್ಯ 3,000 ಕೋ.ರೂ.ಗೂ ಅಧಿಕವಿದೆ ಎಂದು ಕೇಂದ್ರೀಯ ಅಬಕಾರಿ ಮತ್ತು ಸೀಮಾಶುಲ್ಕ ಮಂಡಳಿಯ ಅಧ್ಯಕ್ಷ ನಜೀಬ್ ಶಾ ಹೇಳಿದರು. ಈ ಮಾದಕದ್ರವ್ಯ ಜಾಲದ ಕಿಂಗ್‌ಪಿನ್ ದುಧನಿಯನ್ನು ಬಂಧಿಸಲಾಗಿದ್ದು,ಇತರ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದರು.

ದುಧನಿ ಬಾಲಿವುಡ್ ಚಿತ್ರ ನಿರ್ಮಾಪಕನಾಗಿರುವ ಜೊತೆಗೆ ಮುಂಬೈನಲ್ಲಿ ಉದ್ಯಮಗಳು ಮತ್ತು ಆಸ್ತಿಯನ್ನೂ ಹೊಂದಿದ್ದಾನೆ.

ತನಗೆ ಲಭಿಸಿದ್ದ ಮಾಹಿತಿಯ ಆಧಾರದಲ್ಲಿ ಮಾದಕದ್ರವ್ಯದ ಅಡ್ಡೆ ಉದಯಪುರದಲ್ಲಿದೆ ಎನ್ನುವುದನ್ನು ಡಿಆರ್‌ಐ ಪತ್ತೆ ಹಚ್ಚಿತ್ತು ಮತ್ತು ಬಿಎಸ್‌ಎಫ್ ನೆರವಿನೊಂದಿಗೆ ದುಧನಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಶಾ ತಿಳಿಸಿದರು.

ಮ್ಯಾಂಡ್ರಾಕ್ಸ್,ಎಂ-ಪಿಲ್ಸ್,ಬಟನ್ಸ್ ಅಥವಾ ಸ್ಮಾರ್ಟೀಸ್ ಎಂದು ಸಾಮಾನ್ಯವಾಗಿ ಕರೆಯಲಾಗುವ ಈ ಮಾದಕದ್ರವ್ಯವನ್ನು ಸಾಮಾನ್ಯವಾಗಿ ಗಾಂಜಾದೊಂದಿಗೆ ಮಿಶ್ರ ಗೊಳಿಸಿ ಸೇವಿಸಲಾಗುತ್ತದೆ. ಆಫ್ರಿಕಾ ಮತ್ತು ಏಷ್ಯಾಗಳಲ್ಲಿ ಇದರ ಬಳಕೆ ವ್ಯಾಪಕವಾಗಿದೆ.

ರಾಜಸ್ಥಾನದ ಫ್ಯಾಕ್ಟರಿಯಲ್ಲಿ ಈ ಮಾದಕದ್ರವ್ಯವನ್ನು ತಯಾರಿಸಿ ಮೊಝಾಂಬಿಕ್ ಅಥವಾ ದಕ್ಷಿಣ ಆಫ್ರಿಕಾಕ್ಕೆ ರವಾನಿಸಲಾಗುತ್ತಿತ್ತು ಎಂದು ಶಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News