×
Ad

ಮಾಜಿಯೋಧನ ಆತ್ಮಹತ್ಯೆ: ಆಸ್ಪತ್ರೆಯಿಂದ ಸಿಸೋದಿಯಾರನ್ನು ಬಲವಂತದಿಂದ ಹೊರಗೆಳೆದೊಯ್ದ ದಿಲ್ಲಿ ಪೊಲೀಸರು

Update: 2016-11-02 15:52 IST

ಹೊಸದಿಲ್ಲಿ,ನ.2: ‘ ಸಮಾನ ದರ್ಜೆ ಸಮಾನ ಪಿಂಚಣಿ(ಒಆರ್‌ಒಪಿ)’ ಯೋಜನೆಯ ಶೀಘ್ರ ಅನುಷ್ಠಾನದಲ್ಲಿ ಸರಕಾರದ ವೈಫಲ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧನೋರ್ವನ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಲೆಂದು ಇಲ್ಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ತೆರಳಿದ್ದ ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ. ಸಿಸೋದಿಯಾರನ್ನು ಬಲವಂತದಿಂದ ಆಸ್ಪತ್ರೆಯ ಹೊರಗೊಯ್ದು ಬಸ್ಸೊಂದರಲ್ಲಿ ಸಾಗಿಸಲಾಯಿತು ಎಂದು ವರದಿಗಳು ತಿಳಿಸಿವೆ.

ಒಆರ್‌ಒಪಿ ಜಾರಿಗೊಳಿಸುವಲ್ಲಿ ಸರಕಾರದ ವೈಫಲ್ಯದಿಂದ ಮನನೊಂದಿದ್ದ ಹರ್ಯಾಣ ಮೂಲದ ಮಾಜಿ ಯೋಧ ರಾಮಕಿಶನ್ ಗ್ರೆವಾಲ್ ಮಂಗಳವಾರ ವಿಷ ಸೇವಿಸಿದ್ದರು. ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಯೋಜನೆಯ ಅನುಷ್ಠಾನಕ್ಕಾಗಿ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನಾನಿರತ ಮಾಜಿಯೋಧರಲ್ಲಿ ಗ್ರೆವಾಲ್ ಕೂಡ ಒಬ್ಬರಾಗಿದ್ದರು.

ತಂದೆ ಮನೆಗೆ ಕರೆಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು ಎಂದು ಗ್ರೆವಾಲ್‌ರ ಪುತ್ರ ತಿಳಿಸಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು ವಿವರಗಳನ್ನು ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News