ಹೌದು, ಎನ್‌ಕೌಂಟರ್ ವೇಳೆ ಸಿಮಿ ಕಾರ್ಯಕರ್ತರು ನಿರಾಯುಧರಾಗಿದ್ದರು....ಏನೀಗ ? : ಎಟಿಎಸ್ ವರಿಷ್ಠನ ಪ್ರಶ್ನೆ
ಭೋಪಾಲ್,ನ.2: ಭೋಪಾಲ್‌ನ ಜೈಲಿನಿಂದ ಪರಾರಿಯಾದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಎಂಟು ಸಿಮಿ ಕಾರ್ಯಕರ್ತರು ನಿರಾಯುಧ ರಾಗಿದ್ದರು ಎಂದು ಮಧ್ಯಪ್ರದೇಶ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ವರಿಷ್ಠ ಸಂಜೀವ್ ಶಮಿ ಇಂದಿಲ್ಲಿ ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದರು. ಅದಕ್ಕೇನೀಗ ಎಂದೂ ಅವರು ಪ್ರಶ್ನಿಸಿದರು.
ಆದರೆ,ಪೊಲೀಸರು ಯಾವಾಗ ಬಲವನ್ನು ಪ್ರಯೋಗಿಸಬಹುದು ಮತ್ತು ಯಾವಾಗ ಕ್ರಿಮಿನಲ್‌ಗಳನ್ನು ಕೊಲ್ಲಬಹುದು ಎನ್ನುವುದನ್ನು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹತ ವ್ಯಕ್ತಿಗಳು ಭಯಂಕರ ಪಾತಕಿಗಳಾಗಿದ್ದರು. ಇಂತಹ ವ್ಯಕ್ತಿಗಳು ಪರಾರಿಯಾಗುವ ಸಾಧ್ಯತೆ ಕಂಡುಬಂದರೆ ಪೊಲೀಸರು ಗರಿಷ್ಠ ಬಲವನ್ನು ಪ್ರಯೋಗಿಸಬಹುದಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟವರು ನಿರಾಯುಧರಾಗಿದ್ದರು ಎಂದು ಎರಡು ದಿನಗಳ ಹಿಂದೆ ತಾನು ಮೊದಲ ಬಾರಿ ಘೋಷಿಸಿದಾಗಿನಿಂದ ಇತರ ಪೊಲೀಸ್ ಮತ್ತು ಸರಕಾರಿ ಅಧಿಕಾರಿಗಳು ಅದನ್ನು ಅಲ್ಲಗಳೆದಿರುವುದು ತನಗೆ ಗೊತ್ತಿದೆ ಎಂದ ಅವರು, ತಾನು ತನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದರು.
ಸಿಮಿ ಕಾರ್ಯಕರ್ತರನ್ನು ಕ್ರೂರವಾಗಿ,ನಿಷ್ಕರುಣೆಯಿಂದ ಕೊಲ್ಲಲಾಗಿತ್ತೇ ಎಂಬ ಬಗ್ಗೆ ವಿವರಿಸುವಂತೆ ಸೂಚಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈಗಾಗಲೇ ಮಧ್ಯಪ್ರದೇಶ ಪೊಲೀಸ್ ಮತ್ತು ರಾಜ್ಯ ಸರಕಾರಕ್ಕೆ ನೋಟಿಸುಗಳನ್ನು ಜಾರಿಗೊಳಿ ಸಿದೆ. ನಿರಾಯುಧರಾಗಿದ್ದಂತೆ ಕಂಡು ಬರುತ್ತಿರುವ ಸಿಮಿ ಕಾರ್ಯಕರ್ತರನ್ನು ಆಚಾರಪುರ ಗ್ರಾಮದಲ್ಲಿ ಪೊಲೀಸರು ತುಂಬ ಹತ್ತಿರದಿಂದ ಗುಂಡಿಕ್ಕುತ್ತಿರುವುದನ್ನು ತೋರಿಸುವ ಎರಡು ವೀಡಿಯೊಗಳು ಇದನ್ನೇ ಸೂಚಿಸುತ್ತಿವೆ.
ಪೊಲೀಸರತ್ತ ಗುಂಡು ಹಾರಿಸದಿದ್ದರೂ ಅವರು ಗುಂಡು ಹಾರಿಸಬಹುದು ಎಂದು ಶಮಿ ತಿಳಿಸಿದರು. ಎಟಿಎಸ್ ಸಿಮಿ ಕಾರ್ಯಕರ್ತರ ಎನ್‌ಕೌಂಟರ್ ನಡೆಸಿತ್ತು.
ಸಿಮಿ ಕಾರ್ಯಕರ್ತರು ಜೈಲಿನಿಂದ ಪರಾರಿಯಾಗುವಾಗ ಅವರ ಬಳಿ ಶಸ್ತ್ರಾಸ್ತ್ರಗಳು ಇದ್ದಿರಲಿಲ್ಲವಾದರೂ ಪೊಲೀಸರು ಅವರಿಗೆ ಮುಖಾಮುಖಿಯಾದಾಗ ಅವರ ಬಳಿ ನಾಲ್ಕು ನಾಡಪಿಸ್ತೂಲುಗಳಿದ್ದವು ಮತ್ತು ಪೊಲೀಸರು ತಮ್ಮನ್ನು ಬಂಧಿಸುವುದನ್ನು ಪ್ರತಿರೋಧಿಸಲು ಅವುಗಳನ್ನು ಅವರು ಬಳಸಿದ್ದರು. ಜೈಲಿನಿಂದ ಪರಾರಿಯಾದ ಬಳಿಕ ಅವರಿಗೆ ಈ ಪಿಸ್ತೂಲುಗಳು ಪೂರೈಕೆಯಾಗಿದ್ದವು ಎಂಬ ಇತರ ಪೊಲೀಸ್ ಅಧಿಕಾರಿಗಳು ಮತ್ತು ರಾಜ್ಯದ ಗೃಹಸಚಿವ ಭೂಪಿಂದರ್ ಸಿಂಗ್ ಅವರ ಹೇಳಿಕೆಗಳಿಗೆ ಶಮಿ ಹೇಳಿಕೆ ತದ್ವಿರುದ್ಧವಾಗಿದೆ. ತನ್ಮಧ್ಯೆ ಹತ ಕೈದಿಗಳ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅವರ ತಲೆ,ಎದೆ,ಕಾಲು ಮತ್ತು ಬೆನ್ನಿಗೆ ಗುಂಡುಗಳನ್ನು ಹಾರಿಸಿ ಕೊಲ್ಲಲಾಗಿದೆ ಎಂದು ಹೇಳಲಾಗಿದೆ.