×
Ad

ವ್ಯವಸ್ಥೆಯಿಂದ ನನ್ನ ತಂದೆಯ ಕೊಲೆ: ಪೊಲೀಸ್ ಪೇದೆಯ ಪುತ್ರನ ಆರೋಪ

Update: 2016-11-02 18:08 IST


ಭೋಪಾಲ್, ನ. 3 : ಎಂಟು ಮಂದಿ ಸಿಮಿ ಕಾರ್ಯಕರ್ತರು ಇಲ್ಲಿನ ಸೆಂಟ್ರಲ್ ಜೈಲಿನಿಂದ ಪರಾರಿಯಾಗುವಾಗ ಹತ್ಯೆಗೈದಿದ್ದಾರೆ ಎಂದು ಹೇಳಲಾಗಿರುವ ಹೆಡ್ ಕಾನ್ಸ್ ಟೇಬಲ್ ರಮಾಶಂಕರ್ ಯಾದವ್ ಅವರ ಪುತ್ರ ತನ್ನ ತಂದೆಯ ಸಾವಿಗೆ ಇಡೀ ವ್ಯವಸ್ಥೆಯೇ ಕಾರಣ ಎಂದು ದೂರಿದ್ದಾರೆ. "ವ್ಯವಸ್ಥೆಯಲ್ಲಿನ ಲೋಪದಿಂದಾಗಿ ಕೈದಿಗಳು ಸೆಲ್ ನಿಂದ ಹೊರ ಬಂದಿದ್ದಾರೆ , ಶಸ್ತ್ರಾಸ್ತ್ರ ಪಡೆದಿದ್ದಾರೆ, ಬೆಡ್ ಶೀಟ್ ಬಳಸಿ ಪರಾರಿಯಾಗಿದ್ದಾರೆ. ಆದ್ದರಿಂದ ಇದು ವ್ಯವಸ್ಥೆಯ ಲೋಪದಿಂದ ಆದ ಕೊಲೆ " ಎಂದು ರಮಾಶಂಕರ್ ಅವರ ಪುತ್ರ ಪ್ರಭು ಯಾದವ್ ಅವರು ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ಆರೋಪಿಸಿದ್ದಾರೆ.


" ಸಿಬ್ಬಂದಿ ಕೊರತೆ ಇದೆ ಎಂದು ಎಲ್ಲರಿಗೂ ಗೊತ್ತು. ಆದರೆ ಇರುವ ಸಿಬ್ಬಂದಿಯನ್ನು ಎಲ್ಲಿ , ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಇಲಾಖೆಯೇ ಹೇಳಬೇಕು. ನನ್ನ ತಂದೆಯನ್ನು ಕರ್ತವ್ಯಕ್ಕೆ ನಿಲ್ಲಿಸಿದ್ದಲ್ಲಿ ನಿಜವಾಗಿ ಒಬ್ಬ ಯುವ ಸಿಬ್ಬಂದಿಯನ್ನು ನಿಲ್ಲಿಸಬೇಕಿತ್ತು. ಅದರ ಬದಲು ಹೃದಯ ರೋಗಿಯಾಗಿದ್ದ ವಯಸ್ಸಾಗಿದ್ದ ನನ್ನ ತಂದೆಯನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಯಿತು" ಎಂದು ಪ್ರಭು ದೂರಿದ್ದಾರೆ. 


ರಮಾಶಂಕರ ಅವರ ಹಿರಿಯ ಪುತ್ರ ಅಸ್ಸಾಂ ನಲ್ಲಿ ಸೇನಾ ಕರ್ತವ್ಯದಲ್ಲಿರುವ ಶಂಭು ಯಾದವ್ ಅವರು ಈ ಬಗ್ಗೆ ತಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇದರಲ್ಲಿ ಹಲವಾರು ವಿಷಯಗಳ ಬಗ್ಗೆ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ಹೇಳಿರುವ ಶಂಭು ಅವರು ಪ್ರಕರಣದ ರಾಜಕೀಯ ನಡೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 
ಮಂಗಳವಾರ ರಮಾಶಂಕರ ಅವರ ಅಂತಿಮ ಸಂಸ್ಕಾರ ನಡೆಯಿತು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News