×
Ad

ಮೌಢ್ಯ ಕಾನೂನು ಜಾರಿಗಾಗಿ ಬಲಿಯಾಗಬೇಕಾದ ಜೀವಗಳೆಷ್ಟು?

Update: 2016-11-02 23:25 IST

ಗುವಾಹಟಿಯಲ್ಲಿ ನಡೆದಿರುವ ಈ ಘಟನೆ, ನಮ್ಮದೇ ರಾಜ್ಯದ ಯಾವುದೇ ಮೂಲೆಯಲ್ಲಿ ಯಾವತ್ತೂ ನಡೆಯಬಹುದು. ಓರ್ವನ ಕಾಣೆಯಾಗಿರುವ ಮೊಬೈಲ್‌ನ್ನು ಪತ್ತೆ ಮಾಡುವುದಕ್ಕಾಗಿ ಮಾಂತ್ರಿಕನೊಬ್ಬ ನಾಲ್ಕು ವರ್ಷದ ಬಾಲಕಿಯೊಬ್ಬಳನ್ನು ಬಲಿ ಕೊಟ್ಟಿದ್ದಾನೆ. ಬಹುಶಃ ಮನುಷ್ಯನ ಕ್ರೌರ್ಯದ ಪರಮಾವಧಿಯಿದು. ಈ ಘಟನೆ ವೌಢ್ಯದ ಉತ್ತುಂಗತೆಯನ್ನು ಮಾತ್ರ ಹೇಳುತ್ತಿಲ್ಲ, ಜೊತೆಗೆ ಕ್ರೌರ್ಯ ಮತ್ತು ಸ್ವಾರ್ಥದ ಪರಮಾವಧಿಯನ್ನು ಹೇಳುತ್ತದೆ. ಒಂದು ಮೊಬೈಲ್‌ನಷ್ಟು ಎಳೆ ಜೀವ ಬೆಲೆ ಬಾಳುವುದಿಲ್ಲವೆಂದರೆ, ಮನುಷ್ಯ ಅದೆಷ್ಟು ಕೆಳಮಟ್ಟಕ್ಕೆ ಇಳಿಯುತ್ತಿದ್ದಾನೆ ಎನ್ನುವುದನ್ನು ಹೇಳುತ್ತದೆ. ಇಲ್ಲಿ ಬಲಿಕೊಟ್ಟ ತಾಂತ್ರಿಕ ಮಾತ್ರವಲ್ಲ, ಅವನ ಮೂಲಕ ತಮ್ಮ ಕಾಣೆಯಾಗಿರುವ ಮೊಬೈಲ್‌ನ್ನು ಹುಡುಕಲು ಪ್ರಯತ್ನಿಸಿದ ವ್ಯಕ್ತಿಯೂ ಅತ್ಯಂತ ನೀಚನಾಗಿದ್ದಾನೆ. ಬಹುಶಃ ಯಾವ ಜೈಲುಗಳು, ಯಾವ ನೇಣುಗಂಬಗಳೂ ಈ ಕ್ರೌರ್ಯಕ್ಕೆ ಶಿಕ್ಷೆಯನ್ನು ನೀಡಲು ಸಮರ್ಥವಾಗಲಾರದೇನೋ. ಭಾರತ ದೇಶದಲ್ಲಿ ಗಲ್ಲಿಗಲ್ಲಿಗೊಬ್ಬ ಸ್ವಾಮೀಜಿಗಳಿದ್ದಾರೆ. ತಾಂತ್ರಿಕರಿದ್ದಾರೆ. ಇಲ್ಲಿ ರಾಜಕಾರಣಿಗಳಿಗೂ ಮಾಟ ಮಂತ್ರ ಮಾಡುವವರು ಬೇಕು. ಇನ್ನಷ್ಟು ಮುಂದೆ ಹೋದರೆ, ಇವುಗಳನ್ನೇ ವಿಜ್ಞಾನವೆಂದು ವಾದಿಸುವ ಸಚಿವರೂ ನಮ್ಮಾಳಗಿದ್ದಾರೆ. ಟಿವಿಗಳಿಗಂತೂ ಈ ಕಪಟ ಸ್ವಾಮೀಜಿಗಳು, ಬಾಬಾಗಳು ಬೇಕೇ ಬೇಕು. ಯಾಕೆಂದರೆ, ಇವರಿಂದ ಮೋಸಹೋಗುವುದಕ್ಕಾಗಿಯೇ ಈ ದೇಶದಲ್ಲಿ ಕೋಟ್ಯಂತರ ಜನರು ಟಿವಿ ಮುಂದೆ ಕಾಯುತ್ತಿದ್ದಾರೆ. ಯಾವ ಪ್ರದೇಶಗಳು ಹಿಂದುಳಿದಿದೆಯೋ, ಎಲ್ಲಿ ಆಸ್ಪತ್ರೆ, ಶಾಲೆಗಳ ಕೊರತೆ ಕಂಡು ಬರುತ್ತಿದೆಯೋ ಆ ಜಾಗಗಳನ್ನೆಲ್ಲ ಇಂತಹ ಕಪಟ ಸ್ವಾಮೀಜಿಗಳು, ಮಂತ್ರವಾದಿಗಳು, ಬಾಬಾಗಳು ತುಂಬಿಕೊಂಡಿದ್ದಾರೆ. ಈಶಾನ್ಯ ಭಾರತದಲ್ಲಿ ಇಂತಹ ಮಂತ್ರವಾದಿಗಳು ಸಾಮಾಜಿಕವಾಗಿ ತಳಸ್ತರದ ಸಮಾಜವನ್ನು ಜಿಗಣೆಗಳಂತೆ ರಕ್ತ ಹೀರುತ್ತಿದ್ದಾರೆ.

ಈ ವೌಢ್ಯಗಳಿಗೆ ಹಲವು ಮಗ್ಗಲುಗಳಿವೆ. ಯಾವುದೇ ರೋಗಗಳು ಬಂದರೂ ಇಲ್ಲಿನ ಬಡವರು, ಮಧ್ಯಮ ವರ್ಗದ ಜನರು ಇಂತಹ ಮಂತ್ರವಾದಿಗಳ ಕೈಗೆ ಸಿಕ್ಕಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಶೋಷಣೆಗೊಳಪಡುತ್ತಾರೆ. ತನ್ನ ಕಳೆದು ಹೋದ ಮೊಬೈಲ್‌ನ ನಾಪತ್ತೆಗಾಗಿ ಒಬ್ಬ ವ್ಯಕ್ತಿ ಮಂತ್ರವಾದಿಯನ್ನು ಆಶ್ರಯಿಸುತ್ತಾನೆ ಮತ್ತು ಅದಕ್ಕಾಗಿ ಒಬ್ಬ ಆದಿವಾಸಿ ಬಾಲಕಿಯನ್ನು ಬಲಿಕೊಡುವಷ್ಟರ ಮಟ್ಟಕ್ಕೆ ಮುಂದುವರಿಯುತ್ತಾನೆ ಎಂದರೆ, ಇಲ್ಲಿ ಮನುಷ್ಯ ಜೀವ ಎಷ್ಟು ಅಗ್ಗವಾಗಿದೆ ಎನ್ನುವುದನ್ನು ಊಹಿಸಬಹುದು. ಈ ವೌಢ್ಯದ ನೇರಬಲಿಪಶುಗಳು ಆದಿವಾಸಿ ಜನರೇ ಆಗಿದ್ದಾರೆ. ಇದೇ ಸಂದರ್ಭದಲ್ಲಿ ಕೆಳಜಾತಿಯ ಮಹಿಳೆಯರನ್ನು ದಮನಿಸುವುದಕ್ಕೂ ಈ ಮಾಟಮಂತ್ರಗಳನ್ನು ನೆಪವಾಗಿ ಬಳಸಿಕೊಳ್ಳಲಾಗುತ್ತಿದೆ. ಉತ್ತರ ಭಾರತದಲ್ಲಿ ಮಾಟಗಾತಿ ಎಂಬ ಆರೋಪವನ್ನು ಹೊರಿಸಿ, ಮಹಿಳೆಯರನ್ನು ಜೀವಂತ ದಹಿಸುವ, ಸಾಮೂಹಿಕದಾಳಿಯ ಮೂಲಕ ಕೊಂದು ಹಾಕುವ ಪ್ರಕರಣ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಕಳೆದ ಹದಿನಾಲ್ಕು ವರ್ಷಗಳಲ್ಲಿ 2,000ಕ್ಕೂ ಅಧಿಕ ಮಹಿಳೆಯರನ್ನು ಮಾಟಗಾತಿ ಎಂಬ ಕಾರಣಕ್ಕೆ ಅಥವಾ ಊರಿಗೆ ಮಾಟ ಮಾಡುತ್ತಿದ್ದಾಳೆ ಎಂಬ ಅನುಮಾನದಿಂದ ಗ್ರಾಮಸ್ಥರು ಕೊಂದು ಹಾಕಿದ್ದಾರೆ. ಅನೇಕ ಸಂದರ್ಭಗಳಲ್ಲಿ ಯಾರಿಗಾದರೂ ಕಾಯಿಲೆ ಬಂದಾಗ ತಮಗೆ ಮಾಟ ಮಾಡಿದ್ದಾರೆ ಎಂಬ ಅನುಮಾನದಿಂದ ತಾಂತ್ರಿಕರ ಬಳಿಗೆ ತೆರಳುತ್ತಾರೆ. ಆಗ ಆತ ನೆರೆ ಹೊರೆಯವರನ್ನೋ, ಸಂತ್ರಸ್ತರ ಕುಟುಂಬಸ್ಥರನ್ನೋ ಅದಕ್ಕೆ ಹೊಣೆ ಮಾಡಿದರೆ ಅದು ಅಂತಿಮವಾಗಿ ಸಂಘರ್ಷಕ್ಕೆ ಕಾರಣವಾಗಿ, ಕೊಲೆಯಲ್ಲಿ ಅಂತ್ಯವಾಗುತ್ತದೆ. ಇದೇ ಸಂದರ್ಭದಲ್ಲಿ ಒಂಟಿಯಾಗಿ ಬದುಕುತ್ತಿರುವ ಕೆಳಜಾತಿಯ ಮಹಿಳೆಯರು, ವಿಧವೆಯರು ಈ ಆರೋಪಗಳಿಗೆ ಬಲಿಯಾಗುವುದು ಅಧಿಕ. ಸಾಧಾರಣವಾಗಿ ವರ್ಷಕ್ಕೆ 50ಕ್ಕೂ ಅಧಿಕ ಮಂದಿ ಈ ಆರೋಪಕ್ಕೊಳಗಾಗಿ ಸಾರ್ವಜನಿಕರಿಂದ ಕೊಲೆಗೀಡಾಗುತ್ತಾರೆ. ಆದರೆ ನಮ್ಮ ಕಾನೂನು ವ್ಯವಸ್ಥೆ ಮಾತ್ರ ಇದರ ವಿರುದ್ಧ ಅಸಹಾಯಕವಾಗಿದೆ. ಯಾಕೆಂದರೆ, ಮಾಟ ಮಂತ್ರ ಮೊದಲಾದ ವೌಢ್ಯಕ್ಕೆ ಸಂಬಂಧ ಪಟ್ಟ ಅಪರಾಧಗಳಿಗೆ ಸ್ಪಷ್ಟವಾದ ಕಾನೂನು ಕೂಡ ನಮ್ಮ ನಡುವೆ ಇಲ್ಲ.

ನೇರವಾಗಿ ಮಾಟ ಮಂತ್ರಗಳಿಗೆ ಬಲಿಯಾಗುವ ಪ್ರಕರಣಗಳಿಗೆ ಹೊರತು ಪಡಿಸಿಯೂ ಬಾಬಾಗಳು, ಸ್ವಾಮೀಜಿಗಳ ಕಾರಣದಿಂದ ಬಲಿಪಶುಗಳಾಗುವ ಮಹಿಳೆಯರ ಸಂಖ್ಯೆ ಅತಿ ದೊಡ್ಡದಿದೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮಾನಸಿಕ ಒತ್ತಡಗಳಿಗೆ ಒಳಗಾದರೆ ಅವರು ತಕ್ಷಣ ಸಂಪರ್ಕಿಸುವುದು ಈ ಕಪಟ ಬಾಬಾಗಳನ್ನೇ. ಮಾನಸಿಕ ಖಿನ್ನತೆ ಕಾಯಿಲೆಗಳು ದೇಶಾದ್ಯಂತ ಹೆಚ್ಚುತ್ತಿರುವ ಸಂದರ್ಭದಲ್ಲಿ, ಇಂದಿಗೂ ಈ ಕಾಯಿಲೆಯನ್ನು ಒಂದು ರೋಗವಾಗಿ ಪರಿಗಣಿಸಿ, ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವ ಕ್ರಮ ಗ್ರಾಮೀಣ ಪ್ರದೇಶಗಳಲ್ಲಿ ತೀರಾ ಕಡಿಮೆ. ಮನಸ್ಸಿಗೆ ಸಂಬಂಧಪಟ್ಟ ಕಾಯಿಲೆಗಳನ್ನು ಇತರ ರೋಗಗಳಂತೆಯೇ ಒಂದು ಕಾಯಿಲೆಯೆಂದು ಗುರುತಿಸುವುದೇ ಕಡಿಮೆ. ಜನರ ಅಜ್ಞಾನವನ್ನು ಈ ಕಪಟ ಮಂತ್ರವಾದಿಗಳು ಸುಲಭವಾಗಿ ಬಳಸಿಕೊಳ್ಳುತ್ತಾರೆ. ಪರಿಣಾಮವಾಗಿ, ಕಾಯಿಲೆ ಗುಣವಾಗದೆ ಅದು ದುರಂತದಲ್ಲಿ ಮುಕ್ತಾಯವಾಗುತ್ತದೆ. ಈ ಕಪಟ ಬಾಬಾಗಳಿಗೆ ಯಾವುದೇ ಜಾತಿ, ಧರ್ಮಗಳಿಲ್ಲ. ಎಲ್ಲ ಧರ್ಮಗಳಲ್ಲೂ ಇವರು ವಕ್ಕರಿಸಿಕೊಂಡಿದ್ದಾರೆ. ವಿಪರ್ಯಾಸವೆಂದರೆ, ಗರ್ಭಿಣಿಯರಿಗೆ ಆಸ್ಪತ್ರೆಗೆ ಹೋಗಬಾರದು ಎಂಬ ಸೂಚನೆ ನೀಡಿ, ಅವರನ್ನೂ ತಾಯಿಯ ಹೊಟ್ಟೆಯೊಳಗಿರುವ ಮಗುವನ್ನು ಅಪಾಯಕ್ಕೆ ತಳ್ಳುವ ಪ್ರವೃತ್ತಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿವೆ. ಈ ಧರ್ಮಗುರುಗಳು ಅಥವಾ ಮಾಂತ್ರಿಕರು ನೀಡುವ ನೀರು, ಬೂದಿಯನ್ನು ನಂಬಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸದೆ ಬೇಜವಾಬ್ದಾರಿ ತೋರಿಸುವ ಗಂಡಂದಿರ ಸಂಖ್ಯೆಯೂ ಕಡಿಮೆಯಿಲ್ಲ. ಅಂತಿಮವಾಗಿ ಇವೆಲ್ಲವೂ ದುರಂತದಲ್ಲೇ ಮುಕ್ತಾಯವಾಗುತ್ತದೆಯಾದರೂ, ಎಲ್ಲೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವುದಿಲ್ಲ. ಇಂದು ಈ ಬಾಬಾಗಳು, ಮಂತ್ರವಾದಿಗಳು ಕೇವಲ ಅನಕ್ಷರಸ್ಥರಿಂದಷ್ಟೇ ಬೆಳೆದು ನಿಂತಿರುವುದಲ್ಲ. ರಾಜಕಾರಣಿಗಳು, ಉದ್ಯಮಿಗಳೂ ತಮ್ಮ ತಮ್ಮ ಅಜೆಂಡಾಗಳಿಗಾಗಿ ಇವರನ್ನು ಬಳಸಿಕೊಳ್ಳುತ್ತಾರೆ. ಜನರನ್ನು ಮಂಕುಮರುಳು ಗೊಳಿಸುವುದಕ್ಕೂ ರಾಜಕಾರಣಿಗಳಿಗೆ ಇವರು ಬೇಕು. ಅಷ್ಟೇ ಏಕೆ? ಇಂದು ಟಿವಿ ಮಾಧ್ಯಮಗಳು ಈ ಕಪಟಬಾಬಾಗಳಿಲ್ಲದೆ ತಮ್ಮ ಸಂಸ್ಥೆಯನ್ನು ನಡೆಸುವುದಕ್ಕಾಗುವುದಿಲ್ಲ ಎಂಬ ಸ್ಥಿತಿಯಲ್ಲಿದ್ದಾರೆ. ಯಾರು ಸರ್ವನಾಶವಾದರೂ ತಾವು ಬದುಕಬೇಕು ಎನ್ನುವ ಈ ಅಕ್ಷರಸ್ಥರ ಸ್ವಾರ್ಥಕ್ಕೂ, ತಮ್ಮ ಮೊಬೈಲ್‌ನ್ನು ಹುಡುಕುವುದಕ್ಕಾಗಿ ಮಗುವನ್ನು ಬಲಿಕೊಟ್ಟ ಕ್ರೌರ್ಯಕ್ಕೂ ಇರುವ ಅಂತರ ತೀರಾ ಸಣ್ಣದು. ಆದುದರಿಂದಲೇ, ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಈ ವೌಢ್ಯದ ವಿರುದ್ಧ ಪ್ರಬಲ ಕಾನೂನೊಂದು ಜಾರಿಗೊಳ್ಳಬೇಕಾಗಿದೆ. ಜನರ ಧಾರ್ಮಿಕ ನಂಬಿಕೆ ಬೇರೆ, ವೌಢ್ಯ ಬೇರೆ. ಇವುಗಳ ನಡುವೆ ಅಂತರವನ್ನು ಕಾಯ್ದುಕೊಳ್ಳದೇ ಇದ್ದರೆ ಅಧ್ಯಾತ್ಮದ ಹೆಸರಲ್ಲಿ ಕಪಟಿಗಳು ಹುಟ್ಟಿಕೊಳ್ಳುತ್ತಾರೆ. ಬೀದಿ ಬೀದಿಗಳಲ್ಲಿ ವಾಸ್ತು, ಜ್ಯೋತಿಷ್ಯ, ವೈದ್ಯರ ಮುಖವಾಡ ಹಾಕಿಕೊಂಡು ಕುಳಿತಿರುವ ಕಪಟಿಗಳನ್ನು ಜೈಲಿಗೆ ತಳ್ಳದೇ ಇದ್ದರೆ ಮುಂದೊಂದು ದಿನ, ಕೊಲೆಗಾರರು, ಭೂಗತ ಪಾತಕಿಗಳೆಲ್ಲ ಮಂತ್ರವಾದಿಗಳ ವೇಷ ಧರಿಸಿ ಸಮಾಜವನ್ನು ಆಳುವುದಕ್ಕೆ ಶುರು ಮಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News