×
Ad

ಅಸ್ಪೃಶ್ಯ ಅಲೆಮಾರಿಗಳನ್ನು ನಂಬಿಸಿ ವಂಚಿಸಿದ ರಾಜ್ಯ ಸರಕಾರ!

Update: 2025-12-17 12:41 IST

ಹಂತಹಂತಗಳಲ್ಲಿ ಅಲೆಮಾರಿಗಳಿಗೆ ಸುಳ್ಳು ಭರವಸೆಯನ್ನೇ ಕೊಡುತ್ತಾ ಬಂದ ಕಾಂಗ್ರೆಸ್ ಸರಕಾರ ಹೋರಾಟಗಾರರ ಬಳಿ ತಾವು ಅಲೆಮಾರಿ ಮೀಸಲಾತಿಗೆ ಬದ್ಧ ಎಂದು ಹೇಳಿದ ದಿನವೇ ನ್ಯಾಯಾಲಯದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿಯ ಅಗತ್ಯವಿಲ್ಲ. ಏಕೆಂದರೆ ಅವರು ಇತರರಿಗಿಂತ ಹೆಚ್ಚು ಹಿಂದುಳಿದಿಲ್ಲ ಎಂದು ವಾದಿಸಿದೆ.

ಇದು ದ್ರೋಹವಲ್ಲವೇ? ನಂಬಿಸಿ ಬೆನ್ನಿಗಿರಿದದ್ದಲ್ಲವೇ?

ಕರ್ನಾಟಕದ 101 ಪರಿಶಿಷ್ಟ ಜಾತಿಗಳಲ್ಲೇ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಉಳಿದವರಿಗಿಂತ ಸಾಕಷ್ಟು ಹಿಂದಿರುವ ಅಸ್ಪಶ್ಯ ಅಲೆಮಾರಿ ಸಮುದಾಯಗಳಿಗೆ ಸಿದ್ದು ಸರಕಾರ ಕೊನೆಗೂ ನಂಬಿಸಿ ವಂಚಿಸಿ ಬೆನ್ನಿಗಿರಿದು ದ್ರೋಹಬಗೆದಿದೆ.

ಒಳಮೀಸಲಾತಿಯ ಬಗ್ಗೆ ನ್ಯಾ. ನಾಗಮೋಹನ್ ದಾಸ್ ಆಯೋಗವು ಶಿಫಾರಸು ಮಾಡಿದ 1:6:5:4:1 ಸೂತ್ರವನ್ನು ತಿರಸ್ಕರಿಸಿ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯವನ್ನು ಪರಿಶಿಷ್ಟರಲ್ಲೇ ಕಡಿಮೆ ಹಿಂದುಳಿದ ಲಂಬಾನಿ. ಭೋವಿ, ಕೊರಮ ಮತ್ತು ಕೊರಚ ಸಂಬಂಧಿತ ಜಾತಿಗಳ ಗುಂಪಿನಲ್ಲಿ ವಿಲೀನಗೊಳಿಸಿ ಜಾರಿ ಮಾಡಿದ್ದ 6:6:5 ಸೂತ್ರದ ಅನ್ಯಾಯಯುತ ಆದೇಶಕ್ಕೆ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆಯ ಸ್ವರೂಪವನ್ನು ಕೊಟ್ಟು ಅನ್ಯಾಯವನ್ನು ಶಾಶ್ವತಗೊಳಿಸುತ್ತಿದೆ.

ಹಾಗೆಯೇ ಇದರ ವಿರುದ್ಧ ಅಸ್ಪಶ್ಯ ಅಲೆಮಾರಿ ಒಕ್ಕೂಟವು ಹೈಕೋರ್ಟ್ ನಲ್ಲಿ ಹೂಡಿರುವ ದಾವೆಗೆ ಅಧಿಕೃತ ಆಕ್ಷೇಪಣೆಗಳನ್ನು ಸಲ್ಲಿಸುತ್ತಾ:

‘‘ಅಸ್ಪಶ್ಯ ಅಲೆಮಾರಿ ಸಮುದಾಯಗಳು ಈಗ ಸೇರಿಸಲಾಗಿರುವ ಗುಂಪಿನಲ್ಲಿರುವ ಲಂಬಾಣಿ, ಭೋವಿ ಇನ್ನಿತರ ಜಾತಿಗಳಿಗಿಂತ ಹಿಂದುಳಿದಿಲ್ಲ’’ವೆಂದು ಪ್ರತಿಪಾದನೆ ಮಾಡಿ ಅತ್ಯಂತ ಹಿಂದುಳಿದ ಅಸ್ಪಶ್ಯ ಅಲೆಮಾರಿ ಸಮುದಾಯಗಳನ್ನು ವಂಚಿಸಿ ಬೆನ್ನಿಗಿರಿದಿದೆ.

ಹುಸಿ ಭರವಸೆಗಳ ನಂಬಿಕೆ ದ್ರೋಹ

ವಾಸ್ತವದಲ್ಲಿ ಸರಕಾರವು ಆಗಸ್ಟ್ 19ರಂದು 6:6:5 ಸೂತ್ರವನ್ನು ಘೋಷಿಸಿ ಅಲೆಮಾರಿಗಳಿಗೆ ಅನ್ಯಾಯ ಮಾಡಿದ ರಾತ್ರಿಯಿಂದಲೇ ಅಲೆಮಾರಿಗಳು ಮತ್ತು ಅವರ ಬೆನ್ನಿಗೆ ನಿಂತ ಮಾದಿಗ ಸಮುದಾಯದ ಸಂಘಟನೆಗಳು ಸರಕಾರದ ವಿರುದ್ಧ ಹೋರಾಟ ಪ್ರಾರಂಭಿಸಿದ್ದವು. ಈ ಹೋರಾಟಕ್ಕೆ ನಾಡಿನ ಹಲವಾರು ಪ್ರಗತಿಪರ ಸಂಘಟನೆಗಳು ಹೃತ್ಪೂರ್ವಕ ಬೆಂಬಲ ನೀಡಿ ಸರಕಾರದ ಮೇಲೆ ಒತ್ತಡ ಹಾಕಲು ಪ್ರಾರಂಭಿಸಿದವು.

ಪರಿಣಾಮವಾಗಿ ಅಲೆಮಾರಿ ಹೋರಾಟದ ನಾಯಕರನ್ನು ಹಲವಾರು ಬಾರಿ ಭೇಟಿ ಮಾಡಿದ ಸರಕಾರವು ತಮ್ಮಲ್ಲಿ ವಿಶ್ವಾಸವಿಡಬೇಕೆಂದೂ, ಶೇ. 1 ರಷ್ಟು ಮೀಸಲಾತಿ ನಿರಾಕರಿಸುವುದು ಸರಿಯಲ್ಲವೆಂದು ತಿಳಿದಿದೆಯೆಂದೂ, ಕಾಲಾವಕಾಶ ಕೊಟ್ಟರೆ ಸರಿಪಡಿಸುವುದಾಗಿಯೂ, ನ್ಯಾಯಾಲಯದಲ್ಲಿ ಸರಕಾರದ ಆದೇಶದ ವಿರುದ್ಧ ದಾವೆ ಹೂಡಬಾರದೆಂದೂ ನಯವಾದ ಮಾತುಗಳಲ್ಲಿ ಭರವಸೆ ಕೊಡುತ್ತಲೇ ಬಂದಿತ್ತು. ಆದರೆ ಯಾವುದೇ ಇತ್ಯಾತ್ಮಕ ಕ್ರಮ ತೆಗೆದುಕೊಳ್ಳಲಿಲ್ಲ. ಬದಲಿಗೆ 6:6:5 ಸೂತ್ರದ ಅನ್ವಯವೇ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಾರಂಭಿಸಿತು.

ಹೀಗಾಗಿ ಅಲೆಮಾರಿ ಸಂಘಟನೆಗಳು ಮತ್ತು ಇತರರು ಕರ್ನಾಟಕದ ಕಾಂಗ್ರೆಸ್ ಸರಕಾರಕ್ಕೆ ಸೂಕ್ತವಾದ ಮಾರ್ಗದರ್ಶನ ನೀಡಲು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಲು ದಿಲ್ಲಿ ಚಲೋ ಕೂಡ ಮಾಡಿದರು. ಹೋರಾಟಗಾರರಿಗೆ ಸಿಕ್ಕ ದಿಲ್ಲಿ ನಾಯಕರು ಕರ್ನಾಟಕದ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್‌ರ ಮಧ್ಯಸ್ಥಿಕೆಯಲ್ಲಿ ಮಂತ್ರಿಗಳೊಂದಿಗೆ ಮಾತನಾಡುವ ಶಾಸ್ತ್ರವನ್ನು ಮಾಡಿದರು. ಸರಕಾರದ ಪರವಾಗಿ ಸಮಾಜ ಕಲ್ಯಾಣ ಮಂತ್ರಿ ಎಚ್.ಸಿ. ಮಹದೇವಪ್ಪನವರು ಕೂಡಲೇ ಕರ್ನಾಟಕಕ್ಕೆ ಮರಳಬೇಕೆಂದೂ ಅಲೆಮಾರಿಗಳ ಬೇಡಿಕೆ ಈಡೇರಿಸುವುದಾಗಿಯೂ ಭರವಸೆ ನೀಡಿದರು.

ಗೆಲುವಿನ ಸಂಭ್ರಮದೊಂದಿಗೆ ಕರ್ನಾಟಕಕ್ಕೆ ಹಿಂದಿರುಗಿದ ಅಲೆಮಾರಿ ಹೋರಾಟಗಾರರೊಂದಿಗೆ ತಡವಾಗಿ ಮಾತುಕತೆಯ ಶಾಸ್ತ್ರ ಮಾಡಿದ ಸರಕಾರ ಅಲೆಮಾರಿಗಳಿಗೆ ನಿಗಮ ಇತ್ಯಾದಿಗಳ ಭರವಸೆಯನ್ನು ನೀಡಿತೇ ವಿನಾ ಶೇ. 1ರ ಮೀಸಲಾತಿ ಕಲ್ಪಿಸುವ ಬಗ್ಗೆ ಮತ್ತೆ ಸಮಯ ಕೊಡಿರಿ ಎಂಬ ರಾಗವನ್ನೇ ಹಾಡಿತು.

ಇತ್ತೀಚೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಪ್ರಾರಂಭದಲ್ಲೂ ಹೋರಾಟಗಾರರೊಂದಿಗೆ ಮಾತನಾಡಿದ ಸರಕಾರದ ಮಂತ್ರಿಗಳು ‘ಅಸ್ಪಶ್ಯ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಅಗತ್ಯ’ ಎಂಬ ವಿಷಯದ ಬಗ್ಗೆ ತಮ್ಮ ತಾತ್ವಿಕ ಬದ್ಧತೆಯನ್ನು ಮತ್ತೊಮ್ಮೆ ನುಡಿದು ಸಮಯ ಕೇಳಿದರು ಹಾಗೂ ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಹಿಂದೆಗೆದುಕೊಳ್ಳಲು ಮನವಿ ಮಾಡಿದರು.

ಹೀಗೆ ಹಂತಹಂತಗಳಲ್ಲಿ ಅಲೆಮಾರಿಗಳಿಗೆ ಸುಳ್ಳು ಭರವಸೆಯನ್ನೇ ಕೊಡುತ್ತಾ ಬಂದ ಕಾಂಗ್ರೆಸ್ ಸರಕಾರ ಹೋರಾಟಗಾರರ ಬಳಿ ತಾವು ಅಲೆಮಾರಿ ಮೀಸಲಾತಿಗೆ ಬದ್ಧ ಎಂದು ಹೇಳಿದ ದಿನವೇ ನ್ಯಾಯಾಲಯದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿಯ ಅಗತ್ಯವಿಲ್ಲ. ಏಕೆಂದರೆ ಅವರು ಇತರರಿಗಿಂತ ಹೆಚ್ಚು ಹಿಂದುಳಿದಿಲ್ಲ ಎಂದು ವಾದಿಸಿದೆ.

ಇದು ದ್ರೋಹವಲ್ಲವೇ? ನಂಬಿಸಿ ಬೆನ್ನಿಗಿರಿದದ್ದಲ್ಲವೇ?

ರಾಜ್ಯ ಸರಕಾರದ ಸಾಮಾಜಿಕ ಅನ್ಯಾಯದ ಪ್ರತಿವಾದಗಳು!

ಬೆಳಗಾವಿ ಅಧಿವೇಶನಕ್ಕೆ ಮುಂಚೆ ಹೋರಾಟಗಾರರ ಮುಂದೆ ಅಲೆಮಾರಿ ಮೀಸಲಾತಿಯ ಬಗ್ಗೆ ಹುಸಿ ಬದ್ಧತೆಯನ್ನು, ಹುಸಿ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದಾಗಲೇ ಸರಕಾರದ 6:6:5 ಸೂತ್ರವನ್ನು ಪ್ರಶ್ನಿಸಿ ಅಸ್ಪಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟವು ಹೈಕೋರ್ಟ್‌ನಲ್ಲಿ ಹೂಡಿದ ದಾವೆಗೆ (WP 28612/2025) 2-12-2025ರಂದು ಕರ್ನಾಟಕ ಸರಕಾರ ಆಕ್ಷೇಪಣೆಗಳನ್ನು ಸಲ್ಲಿಸಿಯಾಗಿತ್ತು

ಆ ಆಕ್ಷೇಪಣೆಗಳು ಈವರೆಗೆ ಅಲೆಮಾರಿ ಸಮುದಾಯಗಳಿಗೆ ಸರಕಾರ ಕೊಡುತ್ತಾ ಬಂದಿದ್ದ ಭರವಸೆಗಳನ್ನೆಲ್ಲಾ ಮತ್ತಷ್ಟು ಹುಸಿಗೊಳಿಸಿದೆ.

ಎಲ್ಲಕ್ಕಿಂತ ಮುಖ್ಯವಾಗಿ,...

ಪರಿಶಿಷ್ಟ ಜಾತಿಗಳ ಗುಂಪಿನಲ್ಲಿ ಅಸ್ಪಶ್ಯ ಅಲೆಮಾರಿ ಸಮುದಾಯಗಳು ಇತರ ಜಾತಿಗಳಿಗಿಂತ ಸಾಪೇಕ್ಷವಾಗಿ ಹೆಚ್ಚು ಹಿಂದುಳಿದಿದ್ದಾರೆ ಎನ್ನುವುದನ್ನೇ ತಾತ್ವಿಕವಾಗಿ ನಿರಾಕರಿಸಿದೆ.

ಇದು ಶೇ. 1ರ ಮೀಸಲಾತಿ ನಿರಾಕರಣೆಗಿಂತ ದೊಡ್ಡ ದ್ರೋಹವಾಗಿದೆ.

ಅಷ್ಟು ಮಾತ್ರವಲ್ಲದೆ, ಅಸ್ಪಶ್ಯ ಅಲೆಮಾರಿಗಳು ಸರಕಾರ 6:6:5 ಸೂತ್ರವನ್ನು ರದ್ದುಗೊಳಿಸಬೇಕೆಂದು ಹೂಡಿದ್ದ ದಾವೆಗೆ ಆಕ್ಷೇಪಣೆಗಳನ್ನು ಸಲ್ಲಿಸಿರುವ ಸರಕಾರ ಆ ಪ್ರಕ್ರಿಯೆಯಲ್ಲಿ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ, ಅನುಸರಿಸಿದ ಮಾನದಂಡಗಳೇ ಮೂಲಭೂತವಾಗಿ ತಪ್ಪೆಂದು ವಾದಿಸಿದೆ.

ಸರಕಾರದ ಪ್ರಕಾರ:

1. The Castes and the Sub Castes the petitioners belong are not socially backward than the castes and the subcastes under category D of the report of the Justice Nagmohandas Commission. Therefore the clubbing of the Castes and the Sub castes to which petitioners belong , with the said category D in the impugned Governments orders is in consonance with the principles and the basis of which internal reservation with in the scheduled castes is siad to be permissible under the constitution as per the said decision of Honorbale Apex Court:

ಅಂದರೆ ಸಾರವಿಷ್ಟೆ. ನಾಗಮೋಹನ್ ದಾಸ್ ವರದಿಯಲ್ಲಿ ಗ್ರೂಪ್ ‘ಎ’ಯಲ್ಲಿ ಸೇರಿಸಲ್ಪಟ್ಟಿದ್ದ 59 ಅಲೆಮಾರಿ ಜಾತಿಗಳು ಗ್ರೂಪ್ ‘ಡಿ’ಗೆ ಸೇರಿಸಲ್ಪಟ್ಟಿರುವ ಲಂಬಾಣಿ, ಭೋವಿ, ಕೊರಮ, ಕೊರಚ ಸಂಬಂಧಿತ ಜಾತಿಗಳಿಗಿಂತ ಸಾಮಾಜಿಕವಾಗಿ ಹಿಂದುಳಿದಿಲ್ಲ. ಹೀಗಾಗಿ ಅಲೆಮಾರಿಗಳನ್ನು ಆ ಗುಂಪಿನಲ್ಲಿ ಸೇರಿಸಿರುವುದರಲ್ಲಿ ತಪ್ಪಿಲ್ಲ.

ಆದರೆ ನ್ಯಾ. ನಾಗಮೋಹನ್ ದಾಸ್ ಆಯೋಗವು ಪರಿಶಿಷ್ಟರಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಮತ್ತು ಅರೆ ಅಲೆಮಾರಿಗಳಾದ, 5.22 ಲಕ್ಷ ಜನರಿರುವ 59 ಜಾತಿಗಳನ್ನು ಪ್ರವರ್ಗ ‘ಎ’ಯಲ್ಲಿ ಒಟ್ಟುಗೂಡಿಸಿ ಶೇ.1ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿದ್ದಕ್ಕೆ ಪ್ರಧಾನ ಕಾರಣವೇ ಇತರ ಉಪಜಾತಿಗಳ ಪ್ರವರ್ಗಗಳೊಡನೆ ಈ ಅತ್ಯಂತ ಹಿಂದುಳಿದ ಜಾತಿಗಳನ್ನು ಸೇರಿಸಿದರೆ ಅವರಿಗೆ ಈವರೆಗೆ ಹಾಗೂ ಹೀಗೂ ಸಿಕ್ಕಿರುವ ಅವಕಾಶವೂ ಇಲ್ಲದಂತಾಗುತ್ತದೆ ಎಂಬ ಸಾಮಾಜಿಕ ನ್ಯಾಯದ ಮಾನದಂಡ!

2. ಸಿದ್ದು ಸರಕಾರದ ಮತ್ತೊಂದು ಅತ್ಯಂತ ಅನ್ಯಾಯದ ಪ್ರತಿವಾದವೆಂದರೆ ಗ್ರೂಪ್ ‘ಎ’ಯಲ್ಲಿ ಸೇರಿಸಲ್ಪಟ್ಟಿದ್ದ 59 ಅಲೆಮಾರಿ ಜಾತಿಗಳು ಇತರ ಎಸ್‌ಸಿ ಜಾತಿಗಳಿಗಿಂತ ಹೇಗೆ ಸಾಮಾಜಿಕವಾಗಿ ಹಿಂದುಳಿದಿವೆ ಎಂದು ಸಾಬೀತು ಮಾಡುವುದರಲ್ಲಿ ನಾಗಮೋಹನ್‌ದಾಸ್ ಆಯೋಗ ವಿಫಲವಾಗಿದೆ.

ಅದಕ್ಕೆ ಸರಕಾರವು ಮುಂದಿಟ್ಟಿರುವ ಅಪಾಯಕಾರಿ ಮತ್ತು ವಿತಂಡ ವಾದ ಹೀಗಿದೆ:

59 ಅಸ್ಪಶ್ಯ ಅಲೆಮಾರಿ ಜಾತಿಗಳಲ್ಲಿ 4-5 ಜಾತಿಗಳು (ಬುಡ್ಗ ಜಂಗಮ, ಚನ್ನ ದಾಸರ್, ಹೊಲೆಯ ದಾಸರ್, ಸಿಳ್ಳೆಕ್ಯಾತ, ಸುಡುಗಾಡು ಸಿದ್ದ..) ಸರಕಾರಿ ಹುದ್ದೆಗಳಲ್ಲಿ ಹೆಚ್ಚಿನ ಪ್ರಮಾಣಾತ್ಮಕ ಪ್ರಾತಿನಿಧ್ಯವನ್ನೂ ಹೊಂದಿವೆ ಹಾಗೂ ಕೆಲವು ಪರಿಶಿಷ್ಟ ಜಾತಿಗಳಿಗೆ ಹೋಲಿಸಿದಲ್ಲಿ ಹೆಚ್ಚಿನ ಸಾಕ್ಷರತೆಯನ್ನು ಪಡೆದಿವೆ. ಮತ್ತು ಅಲೆಮಾರಿಗಳ ಕೆಲವೇ ಕೆಲವು ಜಾತಿಗಳ ಭೂ ಹಿಡುವಳಿ ಗ್ರೂಪ್ ‘ಬಿ’ಯಲ್ಲಿ ಸೇರಿಸಲ್ಪಟ್ಟ ಕೆಲವು ಜಾತಿಗಳಿಗಿಂತ (ಮಾಲಾ ಹನ್ನಾನಿ, ಪರಯನ್, ಮಾಹ್ಯವಂಶಿ) ಹೇಗೆ ಹೆಚ್ಚಿದೆ.

ಆದರೆ ಸರಕಾರದ ಈ ಪ್ರತಿವಾದದಲ್ಲಿ ಬಲಿಷ್ಠರ ಹಿತಾಸಕ್ತಿಗೆ ತಕ್ಕಂತೆ ವಾಸ್ತವಗಳನ್ನು ತಪ್ಪು ವ್ಯಾಖ್ಯಾನ ಮಾಡುವ ಹಾಗೂ ತಮ್ಮ ನಿರ್ಧಾರಕ್ಕೆ ಸೂಕ್ತವಾದ ಮಾಹಿತಿಗಳನ್ನು ಆಯ್ಕೆ ಮಾಡುವ ಕುತಂತ್ರವೇ ಎದ್ದು ಕಾಣುತ್ತದೆ.

ಸಾಮಾಜಿಕ ನ್ಯಾಯದ ಆಧಾರದಲ್ಲಿ ಮೀಸಲಾತಿಯನ್ನು ಒದಗಿಸುವಾಗ ಅನುಸರಿಸಬೇಕಾದ ಮಾನದಂಡವೇ ಅಸಮಾನ ಗುಂಪುಗಳನ್ನು ಸಮಾನವಾಗಿ ಕಾಣಬಾರದು ಮತ್ತು ಸಮಾನರನ್ನು ಅಸಮಾನರಾಗಿ ವರ್ಗೀಕರಿಸಬಾರದೆಂಬ ಮಾನದಂಡ.

ಇದರ ಅನುಸಾರ ನ್ಯಾ. ನಾಗಮೋಹನ್ ದಾಸ್ ಆಯೋಗ ವಾಸ್ತವಿಕ ಅಂಕಿಅಂಶಗಳನ್ನು ಆಧರಿಸಿ ವಾಸ್ತವಗಳನ್ನು ಸಮಗ್ರವಾಗಿ ಪರಿಶೀಲಿಸೋಣ. ಸರಕಾರ ಹೈಕೋರ್ಟ್‌ನಲ್ಲಿ ನೀಡಿರುವ ಪ್ರತಿವಾದದ ಪ್ರಕಾರ ನಾಗ್ ಮೋಹನ್ ದಾಸ್ ವರದಿಯ ಪ್ರಕಾರ ಗ್ರೂಪ್ ‘ಎ’ಯಲ್ಲಿದ್ದ ಅಸ್ಪಶ್ಯ ಅಲೆಮಾರಿಗಳ ಸಾಮಾಜಿಕ ಸ್ಥಿತಿಗತಿ ಮತ್ತು ಗ್ರೂಪ್ ‘ಡಿ’ಯಯಲ್ಲಿದ್ದ ಸ್ಪಶ್ಯ ಲಂಬಾಣಿ, ಭೋವಿ, ಕೊರಮ, ಕೊರಚರಿಗಿಂತ ಹಿಂದುಳಿದಿಲ್ಲ.

ಉದಾಹರಣೆಗೆ ನ್ಯಾ. ನಾಗಮೋಹನ್ ದಾಸ್ ಆಯೋಗವು ಗ್ರೂಪ್ ‘ಎ’ಯಲ್ಲಿ ವರ್ಗೀಕರಿಸಿದ ಈ 59 ಜಾತಿಗಳ ಶೈಕ್ಷಣಿಕ, ಪ್ರಾತಿನಿಧ್ಯಗಳ ಪರಿಸ್ಥಿತಿ ಯನ್ನು, ಗ್ರೂಪ್ ‘ಡಿ’ ಎಂದು ವರ್ಗೀಕರಿಸಲ್ಪಟ್ಟಿದ್ದ ಸಾಪೇಕ್ಷವಾಗಿ ಹೆಚ್ಚು ಮುಂದುವರಿದ ಸ್ಪಶ್ಯ ಜಾತಿಗಳ ಪರಿಸ್ಥಿತಿಯೊಡನೆ ಹೋಲಿಸಿ ನೋಡೋಣ:

ಗ್ರೂಪ್ ‘ಎ’ ಮತ್ತು ಗ್ರೂಪ್ ‘ಡಿ’

(ಆಯಾ ಜನಸಂಖ್ಯೆಯ ಶೇಕಡಾವಾರು)

ಪಿಯುಸಿ ತೇರ್ಗಡೆ 6.64---9.12

ಪದವಿ ಪಡೆದವರು 3.66---5.07

ಇಂಜಿನಿಯರಿಂಗ್ 0.93---1.23

ವಸತಿ ಶಾಲೆ 0.50---0.84

ವಿದ್ಯಾರ್ಥಿನಿಲಯ 0.19---0.28

ವಿದ್ಯಾರ್ಥಿ ವೇತನ 15.26---20.09

ಸರಕಾರಿ ಉದ್ಯೋಗ 0.86---1.29

(ನ್ಯಾ. ನಾಗ್ ಮೋಹನ್ ದಾಸ್ ವರದಿ, ಪು. 324)

ಮೇಲಿನ ಕೋಷ್ಟಕ ಸ್ಪಷ್ಟಪಡಿಸುವಂತೆ ಗ್ರೂಪ್ ‘ಎ’ಯಲ್ಲಿದ್ದ 59 ಜಾತಿಗಳೂ ಪರಿಶಿಷ್ಟರಲ್ಲೇ ಎಲ್ಲಾ ಮಾನದಂಡಗಳಲ್ಲೂ ಅತ್ಯಂತ ಹಿಂದುಳಿದವರು. ಗ್ರೂಪ್ ‘ಡಿ’ಯಲ್ಲಿ ವರ್ಗೀಕರಿಸಲಾದ ಗುಂಪು ಪರಿಶಿಷ್ಟರಲ್ಲೇ ಎಲ್ಲ ಮಾನದಂಡಗಳಲ್ಲೂ ಮುಂದಿರುವರು.

ಹೀಗಾಗಿ ಅವೆರಡನ್ನೂ ಒಂದಾಗಿ ವರ್ಗೀಕರಿಸಿರುವ ಸರಕಾರಿ ಸೂತ್ರ ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ವಿರುದ್ಧವಾಗಿ ಅಸಮಾನರನ್ನು ಸಮಾನವಾಗಿ ಕಾಣುತ್ತದೆ ಮತ್ತು ಹೊಸದಾಗಿ ರೂಪಿಸಲಾದ ವರ್ಗದಲ್ಲಿ ಏಕರೂಪತೆಯೂ ಇಲ್ಲ. ಇವೆರಡೂ ಸುಪ್ರೀಂ ನಿರ್ದೇಶನದ ಮತ್ತು ಸಾಮಾಜಿಕ ನ್ಯಾಯ ಮಾನದಂಡದ ಉಲ್ಲಂಘನೆಯೇ ಆಗಿದೆ.

ಹಾಗೆಯೇ, ಪರಿಶಿಷ್ಟರ 101 ಜಾತಿಗಳಲ್ಲಿ:

-25 ಜಾತಿಗಳಲ್ಲಿ ಒಬ್ಬರೂ ತಾಂತ್ರಿಕ ಪದವಿಯನ್ನು ಪಡೆದಿಲ್ಲ.

-14 ಜಾತಿಗಳಲ್ಲಿ ಒಬ್ಬರೂ ಸ್ನಾತಕೋತ್ತರ ಪದವಿ ಪಡೆದಿಲ್ಲ.

-14 ಜಾತಿಗಳಲ್ಲಿ ಒಬ್ಬರೂ ಎಂಬಿಬಿಎಸ್ ಇಲ್ಲ.

-54 ಜಾತಿಗಳಲ್ಲಿ ಒಬ್ಬರೂ ಪಿಎಚ್.ಡಿ. ಇಲ್ಲ.

-ಚಾಂಡಾಲ, ಗರೋಡಿ, ಸಿಂಧೋಳು-ಚಿಂಧೋಳ್ಳು ಎಂಬ ಇತರ 12 ಉಪಜಾತಿಗಳಲ್ಲಿ ಈವರೆಗೆ ಒಬ್ಬರಿಗೂ ಸರಕಾರಿ ಉದ್ಯೋಗ ಸಿಕ್ಕಿಲ್ಲ.

-27,917 ಪರಿಶಿಷ್ಟ ಗ್ರಾಮಪಂಚಾಯತ್ ಸದಸ್ಯರಲ್ಲಿ ಪರಿಶಿಷ್ಟರ 101 ಜಾತಿಗಳಲಿ 41 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ.

-ಮಹಾನಗರ ಪಾಲಿಕೆಯಲ್ಲಿ 52 ಸದಸ್ಯತ್ವದಲ್ಲಿ 89 ಜಾತಿಗಳಿಗೆ ಒಮ್ಮೆಯೂ ಪ್ರಾತಿನಿಧ್ಯ ಸಿಕ್ಕಿಲ್ಲ.

-ನಗರಪಾಲಿಕೆಯ 308 ಪರಿಶಿಷ್ಟ ಸ್ಥಾನಗಳಲ್ಲಿ 82 ಉಪಜಾತಿಗಳಿಗೆ ಈವರೆಗೆ ಅವಕಾಶವಿಲ್ಲ.

-ಪುರಸಭೆಗಳ 516 ಸ್ಥಾನಗಳಲ್ಲಿ 79 ಉಪಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹಾಗೂ

-ಪಟ್ಟಣ ಪಂಚಾಯತ್‌ನ 252 ಸ್ಥಾನಗಳಲ್ಲಿ 78 ಜಾತಿಗಳಿಗೆ ಈವರೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ

ಈ ರೀತಿ ಅವಕಾಶ ವಂಚಿತರಲ್ಲಿ ಅಲೆಮಾರಿ ಸಮುದಾಯದ ಶೇ. 90 ಜಾತಿಗಳು ಸೇರಿಕೊಳ್ಳುತ್ತವೆ ಹಾಗೂ ಅವಕಾಶ ಪಡೆದವರಲ್ಲಿ ಈಗ ಅಲೆಮಾರಿಗಳನ್ನು ಸೇರಿಸಿರುವ ಗ್ರೂಪ್ ‘ಡಿ’ ಜಾತಿಗಳು ಇತರ ಜಾತಿಗಳಿಗಿಂತ ಹೆಚ್ಚು ಪಾಲು ಪಡೆದುಕೊಂಡಿವೆ.

ಇದಲ್ಲದೆ ಮೇಲ್ನೋಟಕ್ಕೆ ಸರಕಾರ ಹೈಕೋರ್ಟ್‌ನಲ್ಲಿ ಕೊಟ್ಟಿರುವ ನಾಲ್ಕು ಅಲೆಮಾರಿ ಜಾತಿಗಳ ಮಾಹಿತಿ ಸರಿ ಎಂದು ಭಾವಿಸಿದರೂ ಅದು ಅನ್ವಯವಾಗುವುದು 59 ಜಾತಿಗಳಲ್ಲಿ ಕೇವಲ 4ಕ್ಕೆ. ಹಾಗಿದ್ದಲ್ಲಿ ಉಳಿದ 55 ಜಾತಿಗಳನ್ನು ಮುಂದುವರಿದ ಗ್ರೂಪಿಗೆ ಸೇರಿಸಿದ್ದೇಕೆ?

ಹೀಗೆ ಸರಕಾರ ಅಸಮಂಜಸ ಹಾಗೂ ಅತಾರ್ಕಿಕ ಮತ್ತು ಆಯ್ದ ಉದಾಹರಣೆಗಳನ್ನು ನೀಡಿ ಅಸ್ಪಶ್ಯ ಅಲೆಮಾರಿಗಳ ಬೆನ್ನಿಗಿರಿದಿದೆ.

3. ಆದರೂ ನಾಗಮೋಹನ್ ದಾಸ್ ಆಯೋಗ ಎಸ್‌ಸಿ ಸಮುದಾಯಗಳೊಳಗೆ ಸಾಪೇಕ್ಷ ಹಿಂದುಳಿದಿರುವಿಕೆಯನ್ನು ಆಧರಿಸಿ ಮಾಡಿದ ಗುಂಪುಗಳ ನಡುವೆ ನೈಜ ವ್ಯತ್ಯಾಸವನ್ನು ಮತ್ತು ಗುಂಪುಗಳೊಳಗೆ ನೈಜ ಸಾಮ್ಯತೆಯನ್ನು ಸಾಬೀತು ಮಾಡಿಲ್ಲ ಎಂದು ಘೋಷಿಸಿ ಪರೋಕ್ಷವಾಗಿ ನಾಗಮೋಹನ್ ದಾಸ್ ವರದಿಯನ್ನೇ ತಿರಸ್ಕರಿಸುತ್ತದೆ.

4. ಆದರೆ ಮತ್ತೊಂದು ಕಡೆ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿಯು ಅತ್ಯಂತ ಹಿಂದುಳಿದವರಿಗೆ ಹೆಚ್ಚು ಮೀಸಲಾತಿ ಕೊಡುವುದೇ ಸಾಮಾಜಿಕ ನ್ಯಾಯ ಎಂದು ಹೇಳಿದ್ದರೂ ಅಲೆಮಾರಿ ಸಮುದಾಯಗಳಿಗೆ ಕೊಟ್ಟಿದ್ದು ಕೇವಲ ಶೇ. 1 ಮೀಸಲಾತಿ. ಅದರಿಂದಲೂ ಆ ಸಮುದಾಯಗಳನ್ನು ಶೇ. 5 ಮೀಸಲಾತಿ ಇರುವ ಗ್ರೂಪ್ ‘ಡಿ’ಗೆ ಸೇರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಈ ಕಾಳಜಿ ಎಷ್ಟು ಅಪ್ರಾಮಾಣಿಕ ಎಂದರೆ ಹೆಚ್ಚು ಮೀಸಲಾತಿ ಸಿಗಲಿ ಅಂತಲೇ ಶೇ. 5 ಮೀಸಲಾತಿ ಪಡೆಯುವ ಗ್ರೂಪ್ ‘ಡಿ’ಗೆ ಯಾಕೆ ಸೇರಿಸಬೇಕಿತ್ತು? ಶೇ. 6 ಮೀಸಲಾತಿ ಪಡೆಯುವ ಮಾದಿಗ ಸಮುದಾಯದ ಗುಂಪಿಗಾಗಲೀ, ಹೊಲೆಯ ಸಮುದಾಯದ ಗುಂಪಿಗಾಗಲಿ ಏಕೆ ಸೇರಿಸಲಿಲ್ಲ? ಅದರ ಅರ್ಥ ಅಸ್ಪಶ್ಯ ಅಲೆಮಾರಿ ಸಮುದಾಯವು ಹೊಲೆಯ ಸಮುದಾಯಕ್ಕಿಂತ, ಮಾದಿಗ ಸಮುದಾಯಕ್ಕಿಂತ ಮುಂದುವರಿದವರು ಎಂದೇ?

ಹುಸಿ ಭರವಸೆಗಳ ಹೊಸ ಶಾಸನ

ಹೀಗೆ ಹೈಕೋರ್ಟ್‌ನಲ್ಲಿ ಮುಂದಿಟ್ಟಿರುವ ವಾದದಲ್ಲಿ ಅಲೆಮಾರಿಗಳ ಹೀನಾಯ ಹಿಂದುಳಿದಿರುವಿಕೆಯನ್ನೇ ನಿರಾಕರಿಸಿದ ಸಿದ್ದು ಸರಕಾರ ಡಿ. 15 ರಂದು ಅದನ್ನೇ ಕಾಯ್ದೆ ಮಾಡಲು ಶಾಸನವನ್ನು ಮಂಡಿಸಿದೆ. ಅದರಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ನಿರಾಕರಿಸುವ 6:6:5 ಸೂತ್ರವನ್ನು ಕಾಯ್ದೆ ಮಾಡಲಾಗಿದೆ. ಆ ಮೂಲಕ ಅಲೆಮಾರಿಗಳಿಗೆ ಈವರೆಗೆ ಕೊಟ್ಟಿದ್ದ ಭರವಸೆಗಳನ್ನೆಲ್ಲಾ ಹುಸಿ ಮಾಡಿದೆ.

ಅದೇ ಕಾಯ್ದೆಯಲ್ಲಿ ‘ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆಯೋಗ’ಕ್ಕೆ ಒಂದು ಸೂಚನೆಯನ್ನು ಕೊಡಲಾಗಿದೆ. ಅದರ ಪ್ರಕಾರ ಆಯೋಗವು ಹೊಸ ಮಾಹಿತಿ ಮತ್ತು ದತ್ತಾಂಶಗಳು ದೊರಕುತ್ತಿದ್ದಂತೆ ಅದನ್ನು ಆಧರಿಸಿ ಒಳಮೀಸಲಾತಿ ವರ್ಗಗಳಲ್ಲಿ ಮೀಸಲಾತಿ ಪ್ರಮಾಣವನ್ನು ಬದಲಾಯಿಸುವ ಬಗ್ಗೆ ಸರಕಾರಕ್ಕೆ ಶಿಫಾರಸು ಮಾಡಲು ಸೂಚಿಸಲಾಗಿದೆ.

ಇದು ಮತ್ತೊಮ್ಮೆ ಮೂಗಿಗೆ ತುಪ್ಪ..ಅಲ್ಲಲ್ಲ.. ಖಾರ ಸವರುವ ಕ್ರಮ. ನ್ಯಾ. ದಾಸ್ ಆಯೋಗವು ಆಳವಾದ ಅಧ್ಯಯನ ಮತ್ತು ಅಂಕಿಅಂಶಗಳನ್ನು ಆಧರಿಸಿ ಅಲೆಮಾರಿಗಳು ಗ್ರೂಪ್ ‘ಡಿ’ಯಲ್ಲಿರುವ ಜಾತಿಗಳಿಗಿಂತ ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂದು ಸೂಚಿಸಿದ್ದಾಗಲೂ ಅದನ್ನು ಬಲಿಷ್ಠರ ಒತ್ತಡಕ್ಕೆ ಮಣಿದು ತಿರಸ್ಕರಿಸಿದ ಸರಕಾರ ಇನ್ನು ಮುಂದೆ ಯಾವಾಗಲೋ ದೊರಕುವ ಅಂಕಿಅಂಶಗಳನ್ನು ಆಧರಿಸಿ ನ್ಯಾಯ ಒದಗಿಸುವುದೇ? ಅಂತಹ ಕ್ರಮಗಳಿಗೆ ಮುಂದಾಗುವುದೇ?

ಹೀಗಾಗಿ ವಿಷಯ ಸ್ಪಷ್ಟ. ಇದುವರೆಗೆ ಎಸ್‌ಸಿ ಸಮುದಾಯಗಳಲ್ಲೇ ಅತ್ಯಂತ ಹಿಂದುಳಿದ ಅಸ್ಪಶ್ಯ ಅಲೆಮಾರಿ ಸಮುದಾಯಗಳಿಗೆ ಶೇ. 1 ಮೀಸಲಾತಿಯನ್ನು ಕೊಡುವ ಬಗ್ಗೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬೆಂಗಳೂರು ಮತ್ತು ದಿಲ್ಲಿಯಲ್ಲಿ ಕೊಟ್ಟ ಭರವಸೆಗಳೆಲ್ಲಾ ಹಸಿ ಸುಳ್ಳು.

ಅಷ್ಟು ಮಾತ್ರವಲ್ಲ. ಈವರೆಗೆ ಸರಕಾರ ತಾವು ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ನೀಡಲು ಬದ್ಧ. ಆದರೆ ಸದ್ಯಕ್ಕೆ ಅದನ್ನು ಜಾರಿ ಮಾಡದೆ ಇರುವುದಕ್ಕೆ ತಾತ್ಕಾಲಿಕ ಮತ್ತು ಆಡಳಿತಾತ್ಮಕ ಕಾರಣಗಳಿವೆ ಎಂದು ಹೋರಾಟಗಾರರ ಮುಂದೆ ಅಲವತ್ತುಕೊಳ್ಳುತ್ತಿದ್ದವು.

ಆದರೆ ಈಗ ಸರಕಾರ ಕೋರ್ಟ್‌ನಲ್ಲಿ ದಾಖಲಿಸಿರುವುದು ಯಾವುದೇ ಆಡಳಿತಾತ್ಮಕ ಕಾರಣಗಳಲ್ಲ. ಬದಲಿಗೆ ಅಸ್ಪಶ್ಯ ಅಲೆಮಾರಿಗಳು ಇತರ ಎಸ್‌ಸಿ ಸಮುದಾಯಗಳಿಗಿಂತ ಸಾಮಾಜಿಕವಾಗಿ ಹಿಂದುಳಿದಿಲ್ಲ ಎಂಬ ನಿಲುವನ್ನು ಪ್ರತಿಪಾದಿಸಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿಯ ಅಗತ್ಯವನ್ನೇ ತಾತ್ವಿಕವಾಗಿ ನಿರಾಕರಿಸಿದೆ.

ಇದು ಮಹಾದ್ರೋಹ. ಇದನ್ನು ನಾಡಿನ ಎಲ್ಲಾ ನೈಜ ಪ್ರಗತಿಪರರು ಖಂಡತುಂಡವಾಗಿ ಖಂಡಿಸಬೇಕು.

ಸಿದ್ದರಾಮಯ್ಯ ಸರಕಾರ ಕುರುಡಿನಿಂದ ಹೊರಬಂದು ಅಲೆಮಾರಿಗಳ ಜೊತೆಗೆ ನಿಲ್ಲಬೇಕು.

ಅಲೆಮಾರಿಗಳ ವಿಷಯದಲ್ಲಿ, ದೇವನಹಳ್ಳಿ ರೈತರ ವಿಷಯದಲ್ಲಿ, ಸರಕಾರಿ ಶಾಲೆಗಳನ್ನು ಮುಚ್ಚುವ ವಿಷಯದಲ್ಲಿ, ಜಾತಿಗಳ ಸಾಮಾಜಿಕ ಹಿಂದುಳಿದಿರುವಿಕೆಯ ಸಮೀಕ್ಷೆಯ ವಿಷಯದಲ್ಲಿ, ಕಾರ್ಮಿಕರ ಹಕ್ಕುಗಳ ವಿಷಯದಲ್ಲಿ ... ಪ್ರತಿಯೊಂದರಲ್ಲೂ ಕಾಂಗ್ರೆಸ್ ಸರಕಾರ ಸಿಹಿ ಮಾತುಗಳಿಂದ ಹೋರಾಟಗಾರರಿಗೆ ಮಂಕು ಬೂದಿ ಎರಚುತ್ತಿದೆ.

ಆಳುವ ಪಕ್ಷದಲ್ಲಿರಬಹುದಾದ ಸಜ್ಜನರ ಕಾಳಜಿ ಆಳುವ ವರ್ಗದ ವರ್ಗ ಹಾಗೂ ಜಾತಿ ಹಿತಾಸಕ್ತಿಯ ಜೊತೆ ಘರ್ಷಣೆಗಿಳಿದು ಜನಪರವಾಗಿ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಈಗಲಾದರೂ ಅರ್ಥವಾಗಬೇಕು.

ಸಿದ್ದು ಸರಕಾರಕ್ಕೆ ಮನವರಿಕೆ ಮಾಡಿದರೆ ಬದಲಾಗುತ್ತಾರೆ ಎಂಬುದು ಹುಸಿ ಎಂಬುದು ಈಗಲಾದರೂ ಅರಿವಾಗಬೇಕಿದೆ. ಅದು ಅರಿವಿನ ಕೊರತೆಯಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ. ಮೇಲ್ಜಾತಿ ಮೇಲ್ವರ್ಗದ, ಬಂಡವಾಳಶಾಹಿ ಆಸಕ್ತಿಗಳನ್ನು ಎದುರು ಹಾಕಿಕೊಂಡು ದಲಿತ-ದಮನಿತ-ಶೋಷಿತ ಜನತಾ ಹಿತಾಸಕ್ತಿಯ ಪರವಾಗಿ ನಿಲ್ಲಲಾಗದ ವರ್ಗ ಮತ್ತು ಜಾತಿ ಹಿತಾಸಕ್ತಿ.

ಆದ್ದರಿಂದ ಪರಿಹಾರ ಇರುವುದು ಸಮಾಲೋಚನೆ, ಸಮನ್ವಯ, ಸಂವಾದಗಳಲ್ಲ. ಹಾಗೆಂದು ಇದಕ್ಕೆ ಪರಿಹಾರ ಖಂಡಿತ ಬಿಜೆಪಿಯೂ ಅಲ್ಲ. ಕಾಂಗ್ರೆಸ್ ಕಳ್ಳನಾದರೆ ಬಿಜೆಪಿ ಮತ್ತು ಸಂಘಪರಿವಾರ ಹಗಲು ದರೋಡೆಕೋರರು ಮತ್ತು ಕೊಲೆಗಡುಕರು. ಆದ್ದರಿಂದ ಪರಿಹಾರ ಇರುವುದು ನೈಜ ಸಾಮಾಜಿಕ ನ್ಯಾಯಕ್ಕಾಗಿ ಬೀದಿಯಲ್ಲಿ ಕಟ್ಟಬೇಕಾದ ದಮನಿತ-ದಲಿತ ಸಮುದಾಯಗಳ ರಾಜಿ ರಹಿತ ಹೋರಾಟದಲ್ಲಿ. ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor

Similar News