×
Ad

ನಿನಗೆ ಹೆಚ್ಚು ಖುಷಿ ಕೊಟ್ಟವರು ಯಾರು.......? : ಅತ್ಯಾಚಾರ ಸಂತ್ರಸ್ತೆಗೆ ಕೇರಳ ಪೊಲೀಸರ ಪ್ರಶ್ನೆ!

Update: 2016-11-03 14:26 IST

ತಿರುವನಂತಪುರ,ನ.3: ತನ್ನ ಪತಿಯ ಸ್ನೇಹಿತರಿಂದಲೇ ಸಾಮೂಹಿಕ ಅತ್ಯಾಚಾರ ಕ್ಕೊಳಗಾಗಿರುವ ಕೇರಳದ ಮಹಿಳೆಯೋರ್ವಳು ಪೊಲೀಸರಿಂದ ಅವಹೇಳನ ಸಹಿಸಲಾಗದೆ ತನ್ನ ದೂರನ್ನು ಅನಿವಾರ್ಯವಾಗಿ ಹಿಂತೆಗೆದುಕೊಂಡಿದ್ದಾಳೆ. ‘ಅವರಲ್ಲಿ ನಿನಗೆ ಅತ್ಯಂತ ಹೆಚ್ಚು ಖುಷಿ ಕೊಟ್ಟವರು ಯಾರು ’ ಎಂದು ಮಾನಗೆಟ್ಟ ಪೊಲೀಸ್ ಅಧಿಕಾರಿ ಆಕೆಯನ್ನು ಪ್ರಶ್ನಿಸಿದ್ದ. ಖ್ಯಾತ ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮೀ ಈ ಆಘಾತಕಾರಿ ವಿಷಯವನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ವ್ಯಾಪಕವಾಗಿ ಶೇರ್ ಆಗಿದೆ. ಹೀಗಾಗಿ ಮುಖ್ಯಮಂತ್ರಿ ಪಿಣರಾಯಿ ಅವರ ಕಚೇರಿಯು ಗಮನ ಹರಿಸುವಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಅದು ಭರವಸೆ ನೀಡಿದೆ.

ಸಂತ್ರಸ್ತ ಮಹಿಳೆ ಮತ್ತು ಆಕೆಯ ಪತಿ ಇಂದು ತಮ್ಮ ಮುಖಗಳನ್ನು ಮುಚ್ಚಿಕೊಂಡು ಬಹಿರಂಗವಾಗಿ ಕಾಣಿಸಿಕೊಂಡು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

 ಪೊಲೀಸರು ನಮ್ಮನ್ನು ಅವಹೇಳನ ಮಾಡಿದ್ದಾರೆ, ಅವರಿಂದ ಇನ್ನಷ್ಟು ಅವಮಾನಗೊಳ್ಳಲು ನಮಗೆ ಇಷ್ಟವಿಲ್ಲ. ಹೀಗಾಗಿ ನಾವು ಪೊಲೀಸರಿಗೆ ನೀಡಿರುವ ದೂರನ್ನು ವಾಪಸ್ ಪಡೆಯುತ್ತಿದ್ದೇವೆ. ಅತ್ಯಾಚಾರಕ್ಕಿಂತ ಪೊಲೀಸರ ಬೆದರಿಕೆಗಳು ಮತ್ತು ಅವಹೇಳನ ಸಹಿಸಲಸಾಧ್ಯವಾಗಿವೆ ಎಂದು 35ರ ಹರೆಯದ ಸಂತ್ರಸ್ತೆ ಹೇಳಿದಳು.

ತ್ರಿಶೂರು ನಿವಾಸಿಯಾಗಿರುವ ಈ ಮಹಿಳೆ ಪತಿಯೊಂದಿಗೆ ತನ್ನನ್ನು ಭೇಟಿಯಾಗಲು ಬಂದಿದ್ದಾಗ ಅಳುವನ್ನು ನಿಲ್ಲಿಸಲು ಆಕೆಗೆ ಸಾಧ್ಯವೇ ಆಗಿರಲಿಲ್ಲ ಎಂದು ಭಾಗ್ಯಲಕ್ಷ್ಮೀ ತನ್ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

 ಕೆಲವು ತಿಂಗಳ ಹಿಂದೆ ತನ್ನ ಪತಿ ಮನೆಯಲ್ಲಿಲ್ಲದಿದ್ದಾಗ ಆತನ ನಾಲ್ವರು ಗೆಳೆಯರು ಬಂದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದರು. ಅವರನ್ನು ನಂಬಿದ್ದ ತಾನು ಅವರೊಂದಿಗೆ ತೆರಳಿದ್ದೆ. ಆದರೆ ಕಾರು ಆಸ್ಪತ್ರೆಯ ಬದಲಾಗಿ ಬೇರೆ ಮಾರ್ಗದಲ್ಲಿ ಸಾಗಿತ್ತು. ನಗರದ ಹೊರವಲಯದ ನಿರ್ಜನ ಪ್ರದೇಶವೊಂದಕ್ಕೆ ತನ್ನನ್ನು ಕರೆದೊಯ್ದ ಅವರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಅವರ ಪೈಕಿ ಓರ್ವ ರಾಜಕೀಯ ಪಕ್ಷವೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾನೆ ಎಂದು ಮಹಿಳೆ ತಿಳಿಸಿದ್ದಾಳೆಂದು ಭಾಗ್ಯಲಕ್ಷ್ಮೀ ಬರೆದಿದ್ದಾರೆ.

ಈ ಕರಾಳ ಘಟನೆಯಿಂದ ಹೆದರಿಕೆ ಮತ್ತು ನೋವು ಅನುಭವಿಸಿದ್ದ ಮಹಿಳೆಗೆ ಮೂರು ತಿಂಗಳ ಬಳಿಕ...ಆಗಸ್ಟ್‌ನಲ್ಲಷ್ಟೇ ತನ್ನ ಪತಿಗೆ ತಿಳಿಸಲು ಸಾಧ್ಯವಾಗಿತ್ತು. ಪತಿಯ ಸೂಚನೆಯಂತೆ ಆಕೆ ಪೊಲೀಸರಲ್ಲಿ ದೂರು ದಾಖಲಿಸಿದ್ದಳು. ನಾಲ್ವರೂ ಆರೋಪಿಗಳನ್ನು ಠಾಣೆಗೆ ಕರೆಸಿದ್ದ ಪೊಲೀಸರು ಅವರೆದುರಿನಲ್ಲಿಯೇ ಆಕೆಗೆ ಅವಹೇಳನಕಾರಿ ಪ್ರಶ್ನೆಗಳನ್ನು ಕೇಳಿದ್ದರು.

ತಾನು ಸಾಮೂಹಿಕ ಅತ್ಯಾಚಾರ ಘಟನೆ ನಡೆದ ಮೂರು ತಿಂಗಳ ಬಳಿಕ ದೂರನ್ನು ಸಲ್ಲಿಸಿರುವುದರಿಂದ ಪ್ರಕರಣವು ದುರ್ಬಲವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಂಡ ಮಹಿಳೆ ಪೊಲೀಸರು ಪದೇ ಪದೇ ಅವಹೇಳನ ಮಾಡಿದ್ದರಿಂದ ದೂರನ್ನು ವಾಪಸ್ ತೆಗೆದುಕೊಂಡಿದ್ದಾಳೆ. ಜಿಷಾ ಮತ್ತು ಸೌಮ್ಯಾ ನಿಜಕ್ಕೂ ಸುದೈವಿಗಳು. ಅತ್ಯಾಚಾರದ ಬಳಿಕ ಅವರು ಬದುಕುಳಿದಿಲ್ಲ, ಇಲ್ಲದಿದ್ದರೆ ಅವರೂ ಪೊಲೀಸರಿಂದ ಪದೇ ಪದೇ ಅವಹೇಳನಕ್ಕೊಳಗಾಗುತ್ತಿದ್ದರು ಎಂದಿದ್ದಾರೆ ಭಾಗ್ಯಲಕ್ಷ್ಮೀ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News