ಅಖಿಲೇಶ್ ಯಾದವರ ಮರ್ಸಿಡಿಸ್ ರಥದಲ್ಲಿ ಏನೇನಿವೆ..?

Update: 2016-11-03 10:56 GMT

ಲಕ್ನೋ,ನ.3: ಕುಟುಂಬ ಒಗ್ಗಟ್ಟಿನ ಪ್ರದರ್ಶನ ಮತ್ತು ತನ್ನ ತಂದೆ ಹಾಗೂ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಅವರಿಂದ ಹಸಿರು ನಿಶಾನೆಯ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ ಯಾದವ ಅವರು ಇಂದಿನಿಂದ ವಿಕಾಸ ರಥಯಾತ್ರೆಯ ಮೂಲಕ ರಾಜ್ಯಾದ್ಯಂತ ಚುನಾವಣಾ ಪ್ರವಾಸ ಕೈಗೊಂಡಿದ್ದಾರೆ. ವಿಕಾಸ ರಥವಾಗಿ ಕೆಂಪುಬಣ್ಣದ ಅತ್ಯಾಧುನಿಕ ಮರ್ಸಿಡಿಸ್ ಬಸ್ ಬಳಕೆಯಾಗುತ್ತಿದೆ. ಪ್ರಯಾಣ ಆರಂಭಿಸಿ ಕೆಲವು ಕಿ.ಮೀ.ಗಳಷ್ಟು ಸಾಗಿದಾಗ ಈ ವಿಕಾಸ ರಥವು ಮಾರ್ಗಮಧ್ಯೆ ಕೆಟ್ಟು ನಿಂತಿದ್ದು ಚಾಲಕ ಅದನ್ನು ದುರಸ್ತಿ ಮಾಡಿದ ಬಳಿಕ ಮುಖ್ಯಮಂತ್ರಿಗಳ ಯಾತ್ರೆ ಮುಂದಕ್ಕೆ ಸಾಗಿದೆ.

ಮರ್ಸಿಡಿಸ್ ರಥದಲ್ಲಿ ಹೈಡ್ರಾಲಿಕ್ ಲಿಫ್ಟ್ ಅಳವಡಿಸಲಾಗಿದ್ದು ಅಖಿಲೇಶ ಅವರು ಸಾರ್ವಜನಿಕ ಭಾಷಣ ಮಾಡುವ ಸಂದರ್ಭದಲ್ಲಿ ಬಸ್ಸಿನ ಮೇಲ್ಭಾಗ ತೆರದುಕೊಳ್ಳುತ್ತದೆ ಮತ್ತು ಈ ಲಿಫ್ಟ್ ಅವರನ್ನು ಮೇಕ್ಕೆತ್ತುತ್ತದೆ. ಅತ್ಯಾಧುನಿಕ ಧ್ವನಿವರ್ಧಕ ವ್ಯವಸ್ಥೆಯಿದ್ದು ಬಸ್ಸು ತನ್ನ ಮಾರ್ಗದುದ್ದಕ್ಕೂ ಪ್ರಚಾರ ಗೀತೆಗಳನ್ನು ಮೊಳಗಿಸುತ್ತ ಸಾಗುತ್ತದೆ.

ಬಸ್ಸಿನಲ್ಲಿ ಎರಡು ಕೋಣೆಗಳಿದ್ದು ಒಂದು ಕುಳಿತುಕೊಳ್ಳುವ ಸ್ಥಳಾವಕಾಶವಾಗಿದ್ದರೆ ಇನೊಂದರಲ್ಲಿ ಮಂಚಗಳಿವೆ. ಅಲ್ಲಿ ವಿಶ್ರಮಿಸಿಕೊಳ್ಳಬಹುದಾಗಿದೆ. ಹಸಿವೆಯೇ...? ಚಿಂತೆ ಬೇಡ. ರೆಫ್ರಿಜರೇಟರ್ ಮತ್ತು ಬಿಸಿ ಊಟಕ್ಕಾಗಿ ಓವನ್ ಕೂಡ ಇದೆ.

ಮುಖ್ಯಮಂತ್ರಿಗಳು ಇತ್ತೀಚಿನ ಸುದ್ದಿಗಳನ್ನು ತಿಳಿದುಕೊಳ್ಳಲು ಮತ್ತು ಅವರ ಮನೋರಂಜನೆಗಾಗಿ ಎರಡು ದೊಡ್ಡ ಗಾತ್ರದ ಟಿವಿಗಳು ಮತ್ತು ಡಿಜಿಟಲ್ ಸಾಧನಗಳು ಇಲ್ಲಿವೆ.

ಬಸ್ಸಿನ ಪಾರ್ಶ್ವಗಳಲ್ಲಿ ನಾಲ್ಕು ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಹೊರಗೇನು ನಡೆಯುತ್ತಿದೆ ಎನ್ನುವುದನ್ನು ಬಸ್ಸಿನಲ್ಲಿ ಕುಳಿತುಕೊಂಡೇ ವೀಕ್ಷಿಸಬಹುದಾಗಿದೆ.

ಬಸ್ಸಿನಲ್ಲಿ ಅತ್ಯಾಧುನಿಕ ಒಳಾಂಗಣ ವಿನ್ಯಾಸವಿದ್ದು,ನಾಲ್ಕು ಆಸನಗಳನ್ನುಹೊಂದಿದೆ. ಎಡಬದಿಯಲ್ಲಿ ಕೆಂಪು ಬಣ್ಣದ ಮೃದುಚರ್ಮದ ಆಸನವಿದ್ದು ಇದು ಮುಖ್ಯ ಪ್ರಚಾರಕನಿಗೆ ಮೀಸಲಾಗಿದೆ.ಯಾತ್ರೆಯ ಪ್ರತಿ ಹಂತದಲ್ಲಿಯೂ ಅಖಿಲೇಶ ತನ್ನ ಸಹಪ್ರಯಾಣಿಕರನ್ನು ಬದಲಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News