×
Ad

ಅಖಿಲೇಶ್ ರಥಯಾತ್ರೆಯಲ್ಲಿ ಒಗ್ಗಟ್ಟಿನ ಮಂತ್ರ

Update: 2016-11-04 00:04 IST

ಲಕ್ನೋ, ನ.3: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಮ್ಮಿಕೊಂಡಿದ್ದ ರಥಯಾತ್ರೆಗೆ ಎಸ್ಪಿ ಪರಮೋಚ್ಚ ಮುಖಂಡ ಮುಲಾಯಂ ಸಿಂಗ್ ಯಾದವ್ ಹಸಿರು ನಿಶಾನೆ ತೋರಿದರೆ, ಶಿವಪಾಲ್ ಯಾದವ್ ಕೂಡಾ ವೇದಿಕೆಯಲ್ಲಿ ಉಪಸ್ಥಿತರಿರುವ ಮೂಲಕ ಒಗ್ಗಟ್ಟಿನ ಸಂದೇಶ ನೀಡಿದರು. ಮಾರ್ಟಿನೆರ್ ಮೈದಾನದಲ್ಲಿ ರಥಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮವಿತ್ತು. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೊದಲಿಗರಾಗಿ ಸ್ಥಳಕ್ಕೆ ಆಗಮಿಸಿದರು. ಕೆಲ ಹೊತ್ತಿನ ಬಳಿಕ ಅವರ ತಂದೆ, ಎಸ್‌ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಹಾಗೂ ಬಳಿಕ ಶಿವಪಾಲ್ ಆಗಮಿಸಿದರು. ವೇದಿಕೆಯಲ್ಲಿ ಮುಲಾಯಂ ಅಕ್ಕಪಕ್ಕ ಅಖಿಲೇಶ್ ಮತ್ತು ಶಿವಪಾಲ್ ಆಸೀನರಾಗಿ ಒಗ್ಗಟ್ಟಿನ ಸಂದೇಶ ಸಾರಿದರು. ಅಖಿಲೇಶ್‌ಗೆ ಶುಭಕೋರಿದ ಶಿವಪಾಲ್, ‘ವಿಕಾಸದಿಂದ ವಿಜಯದೆಡೆಗಿನ ಯಾತ್ರೆ’ ಜನತೆಗೆ ಒಗ್ಗಟ್ಟಿನ ಸಂದೇಶ ರವಾನಿಸಲಿದೆ ಮತ್ತು ಬಿಜೆಪಿಯ ಧಾವಂತಕ್ಕೆ ತಡೆಯೊಡ್ಡಲಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಪಡೆಯದಂತೆ ತಡೆಯುವುದೇ ನಮ್ಮ ಪ್ರಧಾನ ಗುರಿ ಎಂದು ತಿಳಿಸಿದರು. ಬಳಿಕ ಮಾತನಾಡಿದ ಅಖಿಲೇಶ್, ಪಕ್ಷದ ಪರ ಮತ ಹಾಕುವಂತೆ ಈ ಯಾತ್ರೆಯ ಮೂಲಕ ಜನತೆಗೆ ಮನವಿ ಮಾಡಲಾಗುವುದು ಎಂದರು. ಕೆಲವರ ಒಳ ಸಂಚಿನಿಂದಾಗಿ ತಮ್ಮ ಕುಟುಂಬ ಮತ್ತು ಪಕ್ಷದೊಳಗೆ ಭಿನ್ನಮತ ಉಂಟಾಗಿದ್ದು ಇದರಿಂದ ಸ್ವಲ್ಪ ಮಟ್ಟಿನ ತೊಂದರೆಯಾಗಿದೆ. ಆದರೆ ಮುಂಬರುವ ದಿನಗಳಲ್ಲಿ ನಾವು ಮತ್ತೆ ಸರಕಾರ ರಚಿಸಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮುಲಾಯಂ ಸಿಂಗ್ ಯಾದವ್ ಕುಟುಂಬದಲ್ಲಿ ಕಳೆದ ಕೆಲ ಸಮಯದಿಂದ ಭಿನ್ನಾಭಿಪ್ರಾಯ ಪರಾಕಾಷ್ಠೆಗೆ ತಲುಪಿದ್ದು ಮುಯ್ಯಿಗೆ ಮುಯ್ಯಿ ರೀತಿಯಲ್ಲಿ ಮುಖ್ಯಮಂತ್ರಿ ಅಖಿಲೇಶ್ ಬಣ ಮತ್ತು ಅವರ ಚಿಕ್ಕಪ್ಪ (ಮುಲಾಯಂ ಸೋದರ) ಶಿವಪಾಲ್ ಬಣದವರು ಇದಿರು ಬಣದ ನಿಷ್ಠರನ್ನು ಉಚ್ಚಾಟಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಇಳಿದಿದ್ದರು. ಆದರೆ ಇದೀಗ ಒಂದೇ ವೇದಿಕೆಯಲ್ಲಿ ಈ ಇಬ್ಬರು ನಾಯಕರನ್ನು ಸೇರಿಸುವ ಮೂಲಕ ಮುಲಾಯಂ ಸಿಂಗ್ ವಿರಸಕ್ಕೆ ತೇಪೆ ಹಚ್ಚುವ ಕಾರ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂತಲೂ ಹೆಚ್ಚಿನ ಅವಧಿಯಲ್ಲಿ ಸರಕಾರ ನಡೆಸಿದ ಅಭಿವೃದ್ಧಿ ಕೆಲಸಗಳ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಯಾತ್ರೆಗೆ ರೂಪಿಸಲಾಗಿದ್ದ ವಾಹನ ಸುಮಾರು ಒಂದು ಕಿ.ಮೀ. ಸಾಗುತ್ತಿದ್ದಂತೆಯೇ ಕೈಕೊಟ್ಟಿತು. ಬಳಿಕ ಅಖಿಲೇಶ್ ತಮ್ಮ ಅಧಿಕೃತ ವಾಹನದ ಮೂಲಕ ಯಾತ್ರೆ ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News