‘ರಾಬಿನ್‌ಹುಡ್’ಅಧಿಕಾರಿಗೆ ಫಡ್ನವೀಸ್ ಬೆಂಬಲ
ಮುಂಬೈ, ನ.3: ನವಿ ಮುಂಬೈ ಮುನಿಸಿಪಲ್ ಕಮಿಷನರ್ ತುಕಾರಾಂ ಮುಂಢೆ ವಿರುದ್ಧದ ಅವಿಶ್ವಾಸಮತ ನಿರ್ಣಯವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಮಾನತುಗೊಳಿಸಿದ್ದು ಈ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯ ಸೂಚಿಸುವಂತೆ ಬಿಎಂಸಿಗೆ 30 ದಿನಗಳ ಕಾಲಾವಕಾಶ ನೀಡಿದ್ದಾರೆ. ಇದರಿಂದ ಬಿಎಂಸಿಯಲ್ಲಿ ಶಿವಸೇನೆಗೆ ಮತ್ತೊಮ್ಮೆ ಮುಖಭಂಗವಾಗಿದೆ. ತಮ್ಮ ನಿಷ್ಠುರ ಕಾರ್ಯ ವೈಖರಿಯಿಂದ ಮುಂಡೆ ‘ರಾಬಿನ್‌ಹುಡ್’ ಅಧಿಕಾರಿ ಎಂಬ ಹೆಸರು ಪಡೆದಿದ್ದಾರೆ.
ತುಕಾರಾಂ ಮುಂಢೆ ಅವರ ಕಾರ್ಯವೈಖರಿಯಿಂದ ಅಸಮಾಧಾನಗೊಂಡ ಬಿಎಂಸಿಯ 110 ಕಾರ್ಪೊರೇಟರ್‌ಗಳ ಪೈಕಿ 104 ಕಾರ್ಪೊರೇಟರ್‌ಗಳು ಮುಂಡೆ ವಜಾಗೊಳಿಸುವ ಪರವಾಗಿ ಮತ ಹಾಕಿದ್ದರು. ಇದರಲ್ಲಿ ಶಿವಸೇನೆಯ 38 ಕಾರ್ಪೊರೇಟರ್‌ಗಳು ಹಾಗೂ ಇನ್ನುಳಿದವರು ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದವರು. ಬಿಜೆಪಿಯ ಆರು ಮಂದಿ ಮಾತ್ರ ಇದನ್ನು ವಿರೋಧಿಸಿದ್ದರು.
ಬೀದಿ ಬದಿ ವ್ಯಾಪಾರಿಗಳ ತೆರವಿಗೆ ಮತ್ತು ಅನಧಿಕೃತ ನಿರ್ಮಾಣಗಳನ್ನು ಕೆಡವಿ ಹಾಕಲು ಮುಂಢೆ ಕೈಗೊಂಡ ನಿರ್ಧಾರಗಳು ಬಿಎಂಸಿಯಲ್ಲಿ ಎದುರಾಳಿಯಾಗಿರುವ ಪಕ್ಷಗಳನ್ನು ಒಗ್ಗೂಡಿಸಿ ಇವರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಕಾರಣ ವಾಗಿತ್ತು . ಜನಪ್ರತಿನಿಧಿಗಳಾದ ತಮ್ಮನ್ನು ಕಡೆಗಣಿ ಸುತ್ತಿರುವ ಮುಂಢೆ, ತಮ್ಮಿಂದಿಗೆ ಸಮಾಲೋಚಿಸದೆ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ತನ್ನ ದಕ್ಷತೆಯನ್ನು ಜಾಹೀರುಪಡಿಸಲು ಓರ್ವ ಅಧಿಕಾರಿ ರಾಬಿನ್‌ಹುಡ್ ಅಥವಾ ಡಾನ್ ರೀತಿ ಕಾರ್ಯ ನಿರ್ವಹಿಸುವುದು ತರವಲ್ಲ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಬರೆಯಲಾಗಿದೆ. ಅಲ್ಲದೆ ಮುಂಡೆ ವಿರುದ್ದ ಮತಹಾಕಿದ ಬಹುಮತದ ನಿರ್ಧಾರದ ಪರ ನಿಲ್ಲುವಂತೆ ಮುಖ್ಯಮಂತ್ರಿಯನ್ನು ಆಗ್ರಹಿಸಿದೆ. ಮುಂಢೆಯವರ ಕಾರ್ಯ ನಿರ್ವಹಣೆಯ ರೀತಿಯನ್ನು ಮುಖ್ಯಮಂತ್ರಿ ಫಡ್ನವೀಸ್ ಗಮನಕ್ಕೆ ತರುವುದಾಗಿ ಶಿವಸೇನಾ ುುಖ್ಯಸ್ಥ ಉದ್ಧವ್ ಥಾಕ್ರೆ ತಿಳಿಸಿದ್ದಾರೆ.