×
Ad

ಪರಾರಿಗೆ ಸಬ್‌ಜೈಲರ್, ಗಾರ್ಡ್‌ಗಳಿಂದಲೇ ವ್ಯವಸ್ಥೆ?

Update: 2016-11-04 08:36 IST

ಭೋಪಾಲ್, ನ.4: ಎನ್‌ಕೌಂಟರ್ ಸಂತ್ರಸ್ತ ಕೈದಿಗಳು ದೀಪಾವಳಿ ದಿನ ರಾತ್ರಿ ಭೋಪಾಲ್ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಳ್ಳಲು ಸಬ್‌ಜೈಲರ್ ಹಾಗೂ ಇಬ್ಬರು ಗಾರ್ಡ್‌ಗಳು ಸಹಕರಿಸಿದ್ದರೇ ಎಂಬ ಬಗ್ಗೆ ತನಿಖೆ ಇದೀಗ ಆರಂಭವಾಗಿದೆ. ಕೈದಿಗಳು ಪರಾರಿಯಾಗಲು ಒಳಗಿನವರೇ ಸಹಾಯ ಮಾಡಿರಬೇಕು ಎಂಬ ಅನುಮಾನ ದಟ್ಟವಾಗಿರುವ ಹಿನ್ನೆಲೆಯಲ್ಲಿ ಈ ಜೈಲ್‌ಬ್ರೇಕ್ ಪ್ರಕರಣದ ಬಗ್ಗೆ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

ಜೈಲ್‌ಬ್ರೇಕ್ ಪ್ರಕರಣದ ಸೂತ್ರಧಾರ ಎನ್ನಲಾದ ಸಿಮಿ ಮುಖಂಡನನ್ನು ಆತ ತಪ್ಪಿಸಿಕೊಳ್ಳುವ ಕೆಲವೇ ದಿನ ಮೊದಲು ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೇ ಎ ಬ್ಲಾಕ್‌ನಿಂದ ಬಿ ಬ್ಲಾಕ್‌ಗೆ ಏಕೆ ಸ್ಥಳಾಂತರಿಸಲಾಯಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಬಿ ಬ್ಲಾಕ್‌ನಲ್ಲಿ ಬಂಧನದಲ್ಲಿದ್ದ 17 ಕೈದಿಗಳ ಪೈಕಿ 8 ಮಂದಿ, ಜೈಲ್‌ಗಾರ್ಡ್ ರಾಮಶಂಕರ್ ಯಾದವ್‌ನನ್ನು ಹತ್ಯೆ ಮಾಡಿ, ಸಹೋದ್ಯೋಗಿ ಚಂದನ್ ಖಿಲಾಂಟೆ ಎಂಬಾತನನ್ನು ಕಟ್ಟಿಹಾಕಿ ಜೈಲಿನಿಂದ ತಪ್ಪಿಸಿಕೊಂಡಿದ್ದರು.

ಒಂಬತ್ತು ಮಂದಿ ಸಿಮಿ ಕಾರ್ಯಕರ್ತರು ತಪ್ಪಿಸಿಕೊಳ್ಳುವ ಸಂಚು ರೂಪುಗೊಂಡಿತ್ತು. ಆದರೆ ಒಬ್ಬ ಅಸ್ವಸ್ಥನಾಗಿದ್ದ ಕಾರಣ ಆತ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಪ್ರಕರಣದ ಸೂತ್ರಧಾರನಾಗಿದ್ದ ವ್ಯಕ್ತಿ, ಇತರರು ತಪ್ಪಿಸಿಕೊಳ್ಳಲು ಮಾರ್ಗ ಸೂಚಿಸಿದ್ದ ಎಂದು ಮೂಲಗಳು ಹೇಳಿವೆ.

ಪ್ರತಿದಿನ ಬೀಗವನ್ನು ಬದಲಿಸಲಾಗುತ್ತದೆ. ಅವರು ಬೀಗದ ಹತ್ತಿರವೂ ಸುಳಿಯಲು ಅವಕಾಶವಿಲ್ಲ. ಹಾಗಿದ್ದರೂ ನಕಲಿ ಕೀಲಿ ತಯಾರಿಸಲು ಹೇಗೆ ಸಾಧ್ಯ? ಆದ್ದರಿಂದ ಇದರಲ್ಲಿ ಒಳಗಿನವರ ಕೈವಾಡ ಇದ್ದೇ ಇದೆ ಎಂಬ ಶಂಕೆ ದಟ್ಟವಾಗಿದೆ.

ಯಾದವ್ ತನ್ನ ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಎಂಟು ಮಂದಿ ಕೂಡಾ ಮುಕ್ತರಾಗಿದ್ದರು. ಅಷ್ಟಾಗಿಯೂ ಬ್ಲಾಕ್ ಗೇಟಿನ ಕೀಲಿ ಇಲ್ಲದ ಕಾರಣ ಅವರು ಅಲ್ಲೇ ಕತ್ತಲಲ್ಲಿ ಅವಿತುಕೊಂಡಿದ್ದರು. ಯಾದವ್ ಹಾಗೂ ಖಿಲಾಂಟೆ ಗಸ್ತು ತಿರುಗಲು ಬರುವವರೆಗೂ ಕಾದಿದ್ದು, ಹಠಾತ್ತನೇ ದಾಳಿ ಮಾಡಿದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಮೂಲಗಳು ಹೇಳಿವೆ.

ಹೊಸದಾಗಿ ನೇಮಕಗೊಂಡ ಗಾರ್ಡ್, ಇವರು ಗೋಡೆ ಹತ್ತುತ್ತಿರುವುದನ್ನು ನೋಡಿದ್ದಾನೆ. ಕತ್ತಲಲ್ಲೇ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾನೆ. ಆದರೆ ತಪ್ಪಿಸಿಕೊಳ್ಳುತ್ತಿದ್ದವರು ಸಿಮಿ ವಿಚಾರಣಾಧೀನ ಕೈದಿಗಳು ಎನ್ನುವುದು ಆತನಿಗೆ ತಿಳಿಯುವ ಸಾಧ್ಯತೆ ಇದ್ದಿರಲಿಲ್ಲ. ತಕ್ಷಣ ತಪಾಸಣೆ ಆರಂಭವಾಯಿತು. ಆಗ ಯಾದವ್ ಶವ ಕಂಡುಬಂತು. ತಪ್ಪಿಸಿಕೊಳ್ಳುವ ಯತ್ನದಲ್ಲಿ ಒಬ್ಬನ ಕಾಲು ಮುರಿದದ್ದರಿಂದ ಅವರ ಮುಂದಿನ ಕಾರ್ಯತಂತ್ರ ನಿಧಾನವಾಯಿತು ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಮೂಲಗಳು ವಿವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News