ತನ್ನ ಚಾಲಕನ ನಿವೃತ್ತಿಯ ದಿನ ಈ ಜಿಲ್ಲಾಧಿಕಾರಿ ಈವರೆಗೆ ಯಾರೂ ನೀಡದಂತಹ ಬೀಳ್ಕೊಡುಗೆ ನೀಡಿದರು !
ಅಕೋಲಾ, ಮಹಾರಾಷ್ಟ್ರ, ನ.4: ಆ ಅಲಂಕೃತ ಕಾರನ್ನು ನೋಡಿದವರು ಒಂದು ಕ್ಷಣ ಅದು ಯಾವುದೋ ವಿವಾಹ ಸಮಾರಂಭಕ್ಕೆ ಮದುಮಗಳು ಯಾ ಮದುಮಗನನ್ನು ಕರೆದುಕೊಂಡು ಹೋಗುವ ವಾಹನವಿರಬಹುದು ಎಂದುಕೊಳ್ಳಬಹುದು. ಆದರೆ ಆ ಕಾರಿನ ಮೇಲೆ ಕೆಂಪು ದೀಪವಿದೆ ಅಂದರೆ ಅದು ಸರಕಾರಿ ಕಾರಿರಬೇಕು ಎಂಬುದು ಸ್ಪಷ್ಟ. ಅಷ್ಟರೊಳಗಾಗಿ ಸರಕಾರಿ ಅಧಿಕಾರಿಗಳ ಕಾರು ಚಾಲಕರು ಧರಿಸುವಂತಹ ಗರಿಗರಿಯಾದ ಬಿಳಿ ಪ್ಯಾಂಟು ಶರ್ಟು ತೊಟ್ಟ ವ್ಯಕ್ತಿಯೊಬ್ಬನಿಗಾಗಿ ಕಾರಿನ ಹಿಂಬದಿ ಬಾಗಿಲನ್ನು ತೆರೆಯಲಾಯಿತು. ಆತ ಕಾರಿನೊಳಗೆ ಆಸೀನನಾದ. ಸರಕಾರಿ ವಾಹನವೊಂದನ್ನು ಬೇರ್ಯಾವುದೋ ಖಾಸಗಿ ಉದ್ದೇಶಕ್ಕೆ ದುರುಪಯೋಗಪಡಿಸಲಾಗುತ್ತಿದೆಯೆಂದು ನೀವಂದುಕೊಂಡಿದ್ದರೆ, ಸ್ವಲ್ಪ ತಾಳಿ.
ಈ ದಿನ ಮಹಾರಾಷ್ಟ್ರದ ಅಕೋಲ ಜಿಲ್ಲೆಯ ಜಿಲ್ಲಾ ಕಲೆಕ್ಟರ್ ಆಗಿರುವ ಜಿ. ಶ್ರೀಕಾಂತ್ ಅವರ ಕಾರು ಚಾಲಕ ದಿಗಂಬರ್ ಥಕ್ ನಿವೃತ್ತರಾಗುವ ದಿನ. 58 ವರ್ಷದ ದಿಗಂಬರ್ ಇಲ್ಲಿಯ ತನಕ 18 ಕಲೆಕ್ಟರುಗಳಿಗೆ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸಿದವರು. ಅವರಿಗೆ ಅತ್ಯುತ್ತಮವಾಗಿ ವಿದಾಯ ಹೇಳಬೇಕೆಂದು ಯೋಚಿಸಿದ ಜಿಲ್ಲಾಧಿಕಾರಿ ಶ್ರೀಕಾಂತ್ ಯಾರೂ ನೀಡದಂತಹ ಬೀಳ್ಕೊಡುಗೆಯನ್ನು ಅವರಿಗೆ ನೀಡಿದರು. ತಮ್ಮ ಕಾರು ಚಾಲಕನ ಕರ್ತವ್ಯದ ಕೊನೆಯ ದಿನದಂದು ತಾವೇ ವಾಹನ ಚಲಾಯಿಸಿ ಚಾಲಕನನ್ನು ಕಚೇರಿಗೆ ಕರೆ ತಂದರು.
ಇಷ್ಟು ವರ್ಷ ಹಲವಾರು ಕಲೆಕ್ಟರುಗಳು ಕ್ಲಪ್ತವಾಗಿ ಹಾಗೂ ಕ್ಷೇಮವಾಗಿ ಕಚೇರಿ ತಲುಪುವಂತೆ ಮಾಡಿದ ಥಕ್ ಅವರಿಗೆ ಧನ್ಯವಾದ ಹೇಳಲು ತಾನಿಂದು ವಿನೂತನ ರೀತಿಯಲ್ಲಿ ಅವರಿಗೆ ವಿದಾಯ ಹೇಳ ಬಯಸಿದೆ ಎಂದಿದ್ದಾರೆ. ಕಚೇರಿಯಲ್ಲಿ ಆ ದಿನ ದಿಗಂಬರ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.
ಜಿಲ್ಲಾ ಕಲೆಕ್ಟರ್ ಅವರ ಈ ಹೃದಯವಂತಿಕೆಗೆ ದಿಗಂಬರ್ ಥಕ್ ತಲೆಬಾಗಿದ್ದಾರೆ. ಅವರ ಕರ್ತವ್ಯದ ಕೊನೆಯ ದಿನ ಅವಿಸ್ಮರಣೀಯವಾಯಿತು, ಎಂಬುದನ್ನು ಬೇರೆ ಹೇಳಬೇಕಾಗಿಲ್ಲ ಅಲ್ಲವೇ?