ಭಾರತ-ಪಾಕ್ ಗಡಿ ಉದ್ವಿಗ್ನತೆಯ ನಡುವೆಯೇ ಸಾಂಗವಾಗಿ ನಡೆದ ಉಭಯ ದೇಶಗಳ ಪ್ರೇಮಿಗಳ ನಿಶ್ಚಿತಾರ್ಥ

Update: 2016-11-04 09:05 GMT

ಮುಂಬೈ,ನ.4: ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಗಳಿಂದಾಗಿ ಗಡಿಯಲ್ಲಿನ ಉದ್ವಿಗ್ನ ಸ್ಥಿತಿಯ ನಡುವೆಯೇ ಕಳೆದೊಂದು ವರ್ಷದಿಂದ ಪರಸ್ಪರ ಪ್ರೇಮಿಸುತ್ತಿದ್ದ, ತಮ್ಮ ಪ್ರೇಮಕ್ಕೆ ಹಿರಿಯರ ಒಪ್ಪಿಗೆಯ ಮುದ್ರೆಯನ್ನೂ ಪಡೆದುಕೊಂಡಿದ್ದ ಮುಂಬೈನ ಯುವಕ ಮತ್ತು ಕರಾಚಿಯ ಯುವತಿಯ ವಿವಾಹ ನಿಶ್ಚಿತಾರ್ಥ ನಿನ್ನೆ ಇಲ್ಲಿ ಸಂಭ್ರಮದಿಂದ ನಡೆದಿದೆ.

ಮುಂಬೈನ ವೆಬ್‌ಸೈಟೊಂದರ ಉದ್ಯೋಗಿಯಾಗಿರುವ 30ರ ಹರೆಯದ ಮೊಯಿಝ್ ಆಮಿರ್ ಈ ವರ್ಷದ ಜನವರಿಯಲ್ಲಿ ತನ್ನ ಸಂಬಂಧಿಗಳ ಮನೆಯ ಕಾರ್ಯಕ್ರಮ ವೊಂದರಲ್ಲಿ ಮೊದಲ ಬಾರಿಗೆ ಕರಾಚಿ ಸಂಜಾತೆ ಫಾತಿಮಾ ಗಾಡಿವಾಲಾಳನ್ನು ಭೇಟಿಯಾಗಿದ್ದ. ಮೊದಲ ನೋಟದಲ್ಲೇ ಅವರಿಬ್ಬರು ಪರಸ್ಪರರಿಗೆ ತುಂಬ ಇಷ್ಟವಾಗಿದ್ದರು ಮತ್ತು ಅವರಿಬ್ಬರ ನಡುವೆ ಪ್ರಣಯ ಶುರುವಿಟ್ಟುಕೊಂಡಿತ್ತು.

ಭಾರತವು ವಿಭಜನೆಗೊಂಡಾಗ ಆಮಿರ್ ಕುಟುಂಬದ ಕೆಲವು ಬಂಧುಗಳು ಕರಾಚಿಗೆ ಸ್ಥಳಾಂತರಗೊಂಡಿದ್ದರು. ಆಮಿರ್ ಕುಟುಂಬವು ಮಗನಿಗಾಗಿ ವಧುವಿನ ಹುಡುಕಾಟದಲ್ಲಿ ತೊಡಗಿತ್ತು. ಇದೇ ವೇಳೆ ಅತ್ತ ಫಾತಿಮಾಳ ಕುಟುಂಬವೂ ಯೋಗ್ಯ ವರನನ್ನು ಹುಡುಕಾಡುತ್ತಿದೆಯೆಂಬ ವಿಷಯ ಗೊತ್ತಾಗಿತ್ತು. ಎರಡೂ ಕುಟುಂಬಗಳು ಪರಸ್ಪರ ಮಾತುಕತೆ ನಡೆಸಿ ಆಮಿರ್ ಮತ್ತು ಫಾತಿಮಾರ ಮದುವೆಯನ್ನು ಮಾಡಲು ನಿರ್ಧರಿಸಿದ್ದವು.

ನಿಶ್ಚಿತಾರ್ಥವನ್ನು ಮುಂಬೈನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಹೀಗಾಗಿ ವಧುವಿನ ಕುಟುಂಬದವರು ವೀಸಾಕ್ಕೆ ಅರ್ಜಿ ಸಲ್ಲಿಸಲು ಕರಾಚಿಯ ದಾವೂದಿ ಬೊಹ್ರಾ ಜಮಾತ್‌ನ್ನು ಸಂಪರ್ಕಿಸಿದ್ದರು. ಅದು ಅರ್ಜಿಯನ್ನು ಇಸ್ಲಾಮಾಬಾದ್‌ನಲ್ಲಿಯ ಸರಕಾರಿ ಅಧಿಕಾರಿಗಳಿಗೆ ಕಳುಹಿಸಿತ್ತು. ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಂಪೂರ್ಣ ಸಹಕಾರ ನೀಡಿ ವೀಸಾಗಳನ್ನು ಮಂಜೂರು ಮಾಡಿತ್ತು. ವಧು ಫಾತಿಮಾ ತನ್ನ ತಾಯಿ,ಸೋದರನ ಜೊತೆಗೆ ಸಮರೆತಾ ರೈಲಿನಲ್ಲಿ ಈ ವಾರ ಭಾರತವನ್ನು ತಲುಪಿದರೆ, ಆಕೆಯ ಚಿಕ್ಕಪ್ಪ ಮೊನ್ನೆ ವಿಮಾನದಲ್ಲಿ ಬಂದಿಳಿದಿದ್ದರು.

ದಕ್ಷಿಣ ಮುಂಬೈನ ಆಮಿರ್ ನಿವಾಸದಲ್ಲಿ ನಿನ್ನೆ ಭಾರೀ ಸಂಭ್ರಮದ ನಡುವೆ ನಿಶ್ಚಿತಾರ್ಥ ನಡೆಯಿತು. ಮದುವೆ ಮುಂದಿನ ವರ್ಷದ ಆರಂಭದಲ್ಲಿ ಕರಾಚಿಯಲ್ಲಿ ನಡೆಯಲಿದೆ. ಅಲ್ಲಿಗೆ ತೆರಳಲು ವೀಸಾಗಳನ್ನು ಕೋರಿ ಆಮಿರ್ ಮುಂದಿನ ವಾರ ದಿಲ್ಲಿಯಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಗೆ ಅರ್ಜಿ ಸಲ್ಲಿಸಲಿದ್ದಾರೆ. ಭಾರತದ ಅಧಿಕಾರಿಗಳಂತೆ ಪಾಕ್ ಅಧಿಕಾರಿಗಳೂ ವೀಸಾ ನೀಡುವಲ್ಲಿ ತಮ್ಮಾಂದಿಗೆ ಸಹಕರಿಸುತ್ತಾರೆ ಎಂಬ ಆಶಯವನ್ನು ಆಮಿರ್ ವ್ಯಕ್ತಪಡಿಸಿದ್ದಾನೆ.

ನಾವು ಶಸ್ತ್ರಾಸ್ತ್ರಗಳನ್ನು ಬದಿಗಿಟ್ಟು ಸಂವಹನಕ್ಕಾಗಿ ಪ್ರೀತಿಯ ಭಾಷೆಯನ್ನು ಬಳಸಿದರೆ ಈ ಜಗತ್ತು ವಾಸಕ್ಕೆ ಅತ್ಯುತ್ತಮ ತಾಣವಾಗುತ್ತದೆ ಎಂಬ ಸಂದೇಶವನ್ನು ನಮ್ಮ ಮದುವೆಯ ಮೂಲಕ ಉಭಯ ಸರಕಾರಗಳಿಗೆ ರವಾನಿಸುವ ಆಶಯ ನಮ್ಮದು ಎಂದು ಆಮಿರ್ ಹೇಳಿದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News