×
Ad

ಇಸ್ಲಾಮ್ ಭಯ ನಿಷೇಧ ಮಸೂದೆ ಕೆನಡದಲ್ಲಿ ಅಂಗೀಕಾರಗೊಂಡಿತು : ಮಾಧ್ಯಮದಲ್ಲಿ ಸುದ್ದಿಯೇ ಆಗಲಿಲ್ಲ!

Update: 2016-11-04 19:42 IST

ಒಟ್ಟಾವ (ಕೆನಡ), ನ. 4: ಕೆನಡದ ಸಂಸತ್ತು ಕಳೆದ ವಾರ ‘ಇಸ್ಲಾಮ್ ಭಯ ನಿಷೇಧ’ ಮಸೂದೆಯನ್ನು ಅಂಗೀಕರಿಸಿದೆ. ಆದರೆ, ಅದರ ಬಗ್ಗೆ ಕೆನಡದ ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ. ಯಾಕೆ ಹೀಗೆ?
ಆದರೆ, ಇದಕ್ಕೆ ಜನರನ್ನು ದೂರಿ ಪ್ರಯೋಜನವಿಲ್ಲ. ಮುಖ್ಯವಾಹಿನಿಯ ಮಾಧ್ಯಮದಲ್ಲಿ ಈ ಬಗ್ಗೆ ಸುದ್ದಿಯೇ ಬಂದಿಲ್ಲ. ‘ಸಿಬಿಸಿ’ಯಲ್ಲಿ, ‘ಪೋಸ್ಟ್‌ಮೀಡಿಯ’ದಲ್ಲಿ, ‘ಗ್ಲೋಬ್’ನಲ್ಲಿ, ‘ಮೇಲ್’ನಲ್ಲಿ- ಎಲ್ಲಿಯೂ ಇಲ್ಲ.
ಕೆನಡದ ಸಂಸತ್ತಿನಲ್ಲಿ ಅಕ್ಟೋಬರ್ 26ರಂದು ಅಂಗೀಕಾರಗೊಂಡ ಇಸ್ಲಾಮ್ ಭಯ ನಿಷೇಧ ಮಸೂದೆಯ ಬಗ್ಗೆ ಯಾವುದೇ ಲೇಖನವೂ ಪ್ರಕಟವಾಗಿಲ್ಲ. ಆದರೆ, ಅಕ್ಟೋಬರ್ 6ರಂದು ಸೋಲಿಸಲ್ಪಟ್ಟ ಇದೇ ಮಸೂದೆಯ ಬಗ್ಗೆ ಹಲವಾರು ಲೇಖನಗಳಿವೆ.
ಇಸ್ಲಾಮ್ ಭಯವನ್ನು ಖಂಡಿಸುವ ನಿರ್ಣಯವೊಂದು ಸೋಲಿಸಲ್ಪಟ್ಟರೆ ಅದು ಸುದ್ದಿಯಾಗುತ್ತದೆ. ಆದರೆ, ಅದೇ ಮಸೂದೆ ಅಂಗೀಕಾರಗೊಂಡರೆ ಸುದ್ದಿಯೇ ಆಗುವುದಿಲ್ಲ.
ಬಹುಶಃ ಇದು ‘ಇಸ್ಲಾಮ್ ಭಯ ಪೀಡಿತ ಮಾಧ್ಯಮವು ಇಸ್ಲಾಮ್ ಭಯ ನಿಷೇಧ ಮಸೂದೆಗೆ ಪ್ರತಿಕ್ರಿಯಿಸಿದ ರೀತಿ ಇರಬಹುದು ಎಂದು ‘ಹಫಿಂಗ್ಟನ್ ಪೋಸ್ಟ್’ನ ತನ್ನ ಬ್ಲಾಗ್‌ನಲ್ಲಿ ‘ಮಧ್ಯಪ್ರಾಚ್ಯದಲ್ಲಿ ನ್ಯಾಯ ಮತ್ತು ಶಾಂತಿಗಾಗಿ ಕೆನಡಿಯನ್ನರು’ ಎಂಬ ಸಂಘಟನೆಯ ಅಧ್ಯಕ್ಷ ತಾಮಸ್ ವುಡ್‌ಲೇ ಬರೆದಿದ್ದಾರೆ.
ಇದಕ್ಕೆ ನೀವು ಯಾವ ರೀತಿಯ ವಿವರಣೆ ನೀಡಿದರೂ, ಮುಸ್ಲಿಮ್-ಕೆನಡಿಯನ್ ಸಮುದಾಯವು ಸಹಾನುಭೂತಿ ಹಾಗೂ ಮಾನ್ಯತೆ ಪಡೆಯುವ ಅವಕಾಶವೊಂದನ್ನು ನಿರಾಕರಿಸಲಾಗಿದೆ ಎಂದು ಅವರು ಹೇಳುತ್ತಾರೆ.
 ಎಲ್ಲಕ್ಕಿಂತಲೂ ಹೆಚ್ಚಾಗಿ ಇಂಥ ಮಸೂದೆಗಳಿಗೆ ಮಹತ್ವ ಬರುವುದು ಅವುಗಳ ಬಗ್ಗೆ ಜನರಿಗೆ ಗೊತ್ತಾದಾಗ ಮಾತ್ರ. ಅವುಗಳ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ ಎಂದಾದರೆ ಅವುಗಳು ಬಹುತೇಕ ಪರಿಣಾಮರಹಿತವಾಗಿಯೇ ಇರುತ್ತವೆ.
2004ರಲ್ಲಿ ನಡೆದ ಆರ್ಮೇನಿಯನ್ ಹತ್ಯಾಕಾಂಡವನ್ನು ಖಂಡಿಸಿ ಕೆನಡ ಸಂಸತ್ತು ಅಂಗೀಕರಿಸಿದ ನಿರ್ಣಯದ ಗೋಜಿಗೆ ಮಾಧ್ಯಮಗಳು ಹೋಗದಿದ್ದರೆ, ಆರ್ಮೇನಿಯನ್-ಕೆನಡಿಯನ್ನರು ಏನು ಭಾವಿಸುತ್ತಿದ್ದರು?
ಕೆನಡದ ವಸತಿ ಶಾಲೆಗಳಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳಿಗಾಗಿ 2008ರಲ್ಲಿ ಅಂದಿನ ಪ್ರಧಾನಿ ಸ್ಟೀಫನ್ ಹಾರ್ಪರ್ ಕೆನಡದ ಮೂಲ ನಿವಾಸಿಗಳ ಕ್ಷಮೆ ಕೋರಿದರು. ಅದನ್ನು ವರದಿ ಮಾಡುವ ಗೋಜಿಗೆ ಕೆನಡದ ಮಾಧ್ಯಮಗಳು ಹೋಗದಿದ್ದರೆ ಏನಾಗುತ್ತಿತ್ತು? ಕೆನಡದ ತುಳಿತಕ್ಕೊಳಗಾದ ಬುಡಕಟ್ಟು ಜನರಿಗೆ ಮಾಡಿದ ಇನ್ನೊಂದು ಅವಮಾನ ಎಂಬುದಾಗಿ ಅದನ್ನು ಪರಿಗಣಿಸಲಾಗುತ್ತಿತ್ತು.
ಹಾಗಾಗಿ, ಕೆನಡದ ಮಾಧ್ಯಮ ತಮ್ಮನ್ನು ನಿರ್ಲಕ್ಷಿಸಿದೆ ಎಂದು ಕೆನಡಿಯನ್ ಮುಸ್ಲಿಮರು ಭಾವಿಸಿದರೆ ತಪ್ಪೇನೂ ಇಲ್ಲ ಎಂದು ವುಡ್‌ಲೇ ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News