×
Ad

ಕಾಣೆಯಾದ ವಿದ್ಯಾರ್ಥಿ ತಾಯಿ ಮೇಲೆ ದೌರ್ಜನ್ಯ : ನಜೀಬ್ ತಾಯಿಯನ್ನು ಎಳೆದೊಯ್ದ ದಿಲ್ಲಿ ಪೊಲೀಸರು

Update: 2016-11-06 20:02 IST

ಹೊಸದಿಲ್ಲಿ,ನ.6: ಕಳೆದ 20 ದಿನಗಳಿಂದಲೂ ನಿಗೂಢವಾಗಿ ನಾಪತ್ತೆಯಾಗಿರುವ ಇಲ್ಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ಅವರ ಶೋಕತಪ್ತ ತಾಯಿಯ ಮೇಲೆ ಕ್ರೌರ್ಯ ಮೆರೆಯುವ ಮೂಲಕ ದಿಲ್ಲಿ ಪೊಲೀಸರು ರವಿವಾರ ಮತ್ತೊಮ್ಮೆ ತಮ್ಮ ರಾಕ್ಷಸಿತನವನ್ನು ಮೆರೆದಿದ್ದಾರೆ. ದಿಲ್ಲಿ ಪೊಲೀಸರು ಕೇಂದ್ರದ ನರೇಂದ್ರ ಮೋದಿ ಸರಕಾರದ ನೇರ ಅಧೀನದಲ್ಲಿದ್ದಾರೆ.

 ಪುತ್ರನ ನಾಪತ್ತೆ ಕುರಿತು ತಾನು ಸಲ್ಲಿಸಿದ್ದ ದೂರಿಗೆ ಪೊಲೀಸರಿಂದ ಮತ್ತು ಉಪ ರಾಜ್ಯಪಾಲ ನಜೀಬ್ ಜಂಗ್ ಅವರ ನಿಯಂತ್ರಣದಲ್ಲಿರುವ ಆಡಳಿತದಿಂದ ಯಾವುದೇ ಸ್ಪಂದನೆಯಿಲ್ಲದಿರುವುದರಿಂದ ಕಂಗೆಟ್ಟಿರುವ ಅಹ್ಮದ್ ತಾಯಿ ಇಂದು ಇಂಡಿಯಾ ಗೇಟ್ ಬಳಿ ಪ್ರತಿಭಟನೆಯಲ್ಲಿ ತೊಡಗಿದ್ದರು. ಆದರೆ ಇದನ್ನು ಸಹಿಸದ ಮೋದಿಯ ಪೊಲೀಸರು ತಕ್ಷಣವೇ ಕಾರ್ಯಾಚರಣೆಗಿಳಿದು ಈ ವಯಸ್ಸಾದ ಮಹಿಳೆಯನ್ನು ಎಳೆದೊಯ್ದು ತಮ್ಮ ವ್ಯಾನಿಗೆ ತುಂಬಿದ್ದಾರೆ.

 ವಿಪರ್ಯಾಸವೆಂದರೆ ಇಂಡಿಯಾ ಗೇಟ್‌ನಲ್ಲಿ ಎಲ್ಲಿ ಮಗನನ್ನು ಶಾಶ್ವತವಾಗಿ ಕಳೆದುಕೊಂಡು ಬಿಡುತ್ತೇನೋ ಎಂಬ ಆತಂಕದಲ್ಲಿ ದಿನಗಳನ್ನು ದೂಡುತ್ತಿರುವ ಓರ್ವ ತಾಯಿಯ ಪ್ರತಿಭಟನೆಗೆ ಅವಕಾಶ ನೀಡದ ಇದೇ ದಿಲ್ಲಿ ಪೊಲೀಸರು ಮತ್ತು ಆಡಳಿತ ಮೊನ್ನೆಯಷ್ಟೇ ಬಾಲಿವುಡ್ ನಟ ಜಾನ್ ಅಬ್ರಾಹಂ ಮತ್ತು ತಂಡಕ್ಕೆ ಅವರ ಮುಂಬರುವ ಚಿತ್ರ ‘ಫೋರ್ಸ್ 2’ರ ಪ್ರಚಾರಕ್ಕೆ ಇದೇ ಸ್ಥಳದಲ್ಲಿ ಸಂಪೂರ್ಣ ರಾಜಮರ್ಯಾದೆಯೊಡನೆ ಅನುಮತಿ ನೀಡಿತ್ತು. ದುಃಖತಪ್ತ ತಾಯಿಯೋರ್ವಳು ಈ ಬಿಗುಭದ್ರತೆಯ ಸ್ಥಳದಲ್ಲಿ ಪ್ರತಿಭಟನೆಗಿಳಿದಿದ್ದು ಮಾತ್ರ ಮೋದಿ ಸರಕಾರಕ್ಕೆ ಅತ್ಯಂತ ಆಕ್ಷೇಪಾರ್ಹವಾಗಿಬಿಟ್ಟಿತ್ತು.

ಕಳೆದ ವಾರವಷ್ಟೇ ಒಆರ್‌ಒಪಿ ಕುರಿತಂತೆ ಆತ್ಮಹತ್ಯೆ ಮಾಡಿಕೊಂಡ ಮಾಜಿಯೋಧ ರಾಮಕಿಶನ್ ಗ್ರೆವಾಲ್ ಅವರ ಶೋಕತಪ್ತ ಕುಟುಂಬವನ್ನು ಭೇಟಿಯಾಗಲು ಯತ್ನಿಸಿದ್ದ ಬಿಜೆಪಿಯೇತರ ಪಕ್ಷಗಳ ನಾಯಕರನ್ನು ಬಂಧಿಸುವ ಮೂಲಕ ದಿಲ್ಲಿ ಪೊಲೀಸರು ರಾಕ್ಷಸಿತನ ಮೆರೆದಿದ್ದು ಇನ್ನೂ ಜನಮಾನಸದಲ್ಲಿ ಹಸಿರಾಗಿರುವಾಗಲೇ ಇಂದು ಮತ್ತೊಮ್ಮೆ ಕ್ರೌರ್ಯ ಪ್ರದರ್ಶಿಸಿದ್ದಾರೆ. ಇದೇ ಪೊಲೀಸರು ಮೃತ ಗ್ರೆವಾಲ್ ಆತ್ಮಹತ್ಯೆಗೆ ಶರಣಾದ ಕೆಲವೇ ಗಂಟೆಗಳಲ್ಲಿ ಅವರ ಶೋಕತಪ್ತ ಪುತ್ರನನ್ನೂ ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News