ಪತ್ನಿಯ ಶವವನ್ನು ತಳ್ಳುಗಾಡಿಯಲ್ಲಿ 50 ಕಿ.ಮೀ. ಸಾಗಿಸಿದ ಕುಷ್ಠರೋಗಿ

Update: 2016-11-07 04:46 GMT

ಹೈದರಾಬಾದ್, ನ.7:  ಕುಷ್ಠರೋಗಿಯೊಬ್ಬ ತನ್ನ ಪತ್ನಿಯ ಶವವನ್ನು ತಳ್ಳುಹಾಡಿಯಲ್ಲಿ ಹಾಕಿಕೊಂಡು 50 ಕಿಲೋಮೀಟರ್ ಸಾಗಿಸಿದ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ರಾಮುಲು ಎಂಬಾತ ತನ್ನ ಪತ್ನಿಯ ಅಂತ್ಯಸಂಸ್ಕಾರ ನೆರವೇರಿಸಲು ಲಂಗರ್ ಹೌಸ್‌ನಿಂದ ಆಕೆಯ ಹುಟ್ಟೂರಿಗೆ ತಳ್ಳುಗಾಡಿಯಲ್ಲೇ ಶವ ಸಾಗಿಸಲು ಮುಂದಾಗಿದ್ದ. ಆಂಬುಲೆನ್ಸ್‌ನಲ್ಲಿ ಶವ ಒಯ್ಯಲು 5,000 ರೂಪಾಯಿ ವೆಚ್ಚವಾಗುತ್ತದೆ ಎಂಬ ಕಾರಣದಿಂದ ರಾಮುಲುಗೆ, ತಳ್ಳುಗಾಡಿಯಲ್ಲಿ ಸಾಗಿಸುವುದು ಬಿಟ್ಟರೆ ಬೇರೆ ಮಾರ್ಗವೇ ಇರಲಿಲ್ಲ. ಕುಷ್ಠರೋಗಕ್ಕೆ ತುತ್ತಾಗಿದ್ದ ಆತನ ಪತ್ನಿ ಕವಿತಾ ನವೆಂಬರ್ 4ರಂದು ಮೃತಪಟ್ಟಿದ್ದಳು.

ತಳ್ಳುಗಾಡಿಯಲ್ಲಿ ಶವ ಒಯ್ಯುತ್ತಿರುವ ದೃಶ್ಯವನ್ನು ನೋಡಿದ ವಿಕಾರಾಬಾದ್ ಜಿಲ್ಲೆ ಎಂಆರ್‌ಪಿ ಜಂಕ್ಷನ್ ನಿವಾಸಿಗಳು ಆತನ ನೆರವಿಗೆ ಬರುವವರೆಗೂ ತಳ್ಳುಗಾಡಿಯಲ್ಲೇ ಶವಯಾತ್ರೆ ನಡೆದಿತ್ತು. ಕವಿತಾಳ ಹುಟ್ಟೂರು ಸಂಗಾರೆಡ್ಡಿ ಜಿಲ್ಲೆಯ ಮನೂರು ಗ್ರಾಮಕ್ಕೆ ಒಯ್ದು ಶವಸಂಸ್ಕಾರ ನೆರವೇರಿಸಲು ರಾಮುಲು ಬಯಸಿದ್ದ. ಸ್ಥಳೀಯರು ವಿಕಾರಾಬಾದ್‌ನಲ್ಲಿ ಹಣ ಸಂಗ್ರಹಿಸಿ ಕೊಟ್ಟ ಬಳಿಕ ಅಂಬುಲೆನ್ಸ್‌ನಲ್ಲಿ ಶವ ಒಯ್ಯಲು ವ್ಯವಸ್ಥೆ ಮಾಡಿದ್ದಾಗಿ ಸಿಪಿಐ ಜಿ.ರವಿ ವಿವರಿಸಿದರು.

ಶನಿವಾರ ಅಪರಾಹ್ನ 3:30ರ ವೇಳೆಗೆ ಶವವನ್ನು ಗಾಡಿಯಲ್ಲಿ ತಳ್ಳುತ್ತಾ ರಾಮುಲು ವಿಕಾರಾಬಾದ್ ತಲುಪಿದ್ದ. ಸ್ಥಳೀಯರು ಆತನ ನೆರವಿಗೆ ಬಾರದಿದ್ದರೆ ಮತ್ತೆ 80 ಕಿಲೋಮೀಟರ್‌ಗಳಷ್ಟು ದೂರ ಹೀಗೆ ತಳ್ಳುಗಾಡಿಯಲ್ಲೇ ಸಾಗಬೇಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News