18 ವರ್ಷದ ಯುವತಿಗೆ ಹೆರಿಗೆ, 12 ವರ್ಷದ ಬಾಲಕನ ವಿರುದ್ಧ ಪ್ರಕರಣ !
ಎರ್ನಾಕುಳಂ, ನ.7: ಕೊಚ್ಚಿ ಆಸ್ಪತ್ರೆಯಲ್ಲಿ ಇತ್ತೀಚೆಗೆ 18 ವರ್ಷದ ಯುವತಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು ಆಕೆಯ ಗರ್ಭಕ್ಕೆ ಕಾರಣನಾಗಿದ್ದಾನೆಂದು ಹೇಳಲಾಗಿರುವ 12 ವರ್ಷಗಳ ಬಾಲಕನ ವಿರುದ್ಧ ಕಲಮಶ್ಶೇರಿ ಪೊಲೀಸರು ಬಾಲಾಪರಾಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.
ಯುವತಿಗೆ 18 ವರ್ಷ ತುಂಬಲು ಎರಡು ತಿಂಗಳು ಬಾಕಿಯಿರುವಾಗಲೇ ಆಕೆ ಗರ್ಭ ಧರಿಸಿದ್ದಳು ಎಂದು ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದ ಖಾಸಗಿ ಆಸ್ಪತ್ರೆಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಆದರೆ ತಾನು ಈಗಾಗಲೇ ಚೈಲ್ಡ್ ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಈ ಪ್ರಕರಣದ ಸಂಬಂಧದ ದಾಖಲೆಗಳನ್ನುಅವರಿಗೆ ನೀಡಿದ್ದಾಗಿ ಆಸ್ಪತ್ರೆ ಹೇಳಿಕೊಂಡಿದೆ. ಯುವತಿಯನ್ನು ನವೆಂಬರ್ 4 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
ಆಸ್ಪತ್ರೆ ತಮಗೆ ಯುವತಿ ಮಗುವಿಗೆ ಜನ್ಮ ನೀಡಿದ ಮರುದಿನವಷ್ಟೇ ಮಾಹಿತಿ ನೀಡಿತ್ತು ಎಂದು ಕಲಮಶ್ಶೇರಿ ಸರ್ಕಲ್ ಇನಸ್ಪೆಕ್ಟರ್ ಜಯಕೃಷ್ಣನ್ ಹೇಳಿಕೊಂಡಿದ್ದಾರೆ. ಪೊಕ್ಸೊ ಕಾಯ್ದೆಯ ಸೆಕ್ಷನ್ 18 ರ ಪ್ರಕಾರ ಆಸ್ಪತ್ರೆಯ ಅಧಿಕಾರಿಗಳು ನಮಗೆ ಕೂಡಲೇ ಮಾಹಿತಿ ನೀಡಬೇಕಿತ್ತು ಎಂದು ಅವರು ತಿಳಿಸಿದ್ದಾರೆ.
ಆದರೆ ಚೈಲ್ಡ್ ಲೈನ್ ಹಾಗೂ ಮಕ್ಕಳ ಕಲ್ಯಾಣ ಆಯೋಗದ ಅಧಿಕಾರಿಗಳ ಪ್ರಕಾರ ಬಾಲಾಪರಾಧಿ ಕಾಯ್ದೆಯನ್ವಯ ಪೊಲೀಸರಿಗೆ ಮಾಹಿತಿ ನೀಡುವುದು ಕಡ್ಡಾಯವಲ್ಲ. ಬದಲಾಗಿ ಕಾಯ್ದೆಯಲ್ಲಿ ನಮೂದಿಸಲಾದ ಸಂಸ್ಥೆಗಳಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ.
ಮಗುವನ್ನು ತಮಗೆ ಸಾಕಲು ಸಾಧ್ಯವಿಲ್ಲವೆಂದು ಮಗುವಿನ ಅಜ್ಜ ಹಾಗೂ ಅಜ್ಜಿ ಹೇಳಿರುವುದರಿಂದ ನವಜಾತ ಶಿಶುವನ್ನು ಸರಕಾರದಿಂದ ನಡೆಸಲಾಗುವ ಮಕ್ಕಳ ಕೇಂದ್ರಕ್ಕೆ ಕಳುಹಿಸಲಾಗಿದೆ.