ಕಾನ್ಪುರದ ಚಂದ್ರಪಾಲ್ ಸಿಂಗ್ ತನ್ನ ಮನೆಯ ಮೇಲೆ ಪಾಕ್ ಧ್ವಜ ಹಾರಿಸಿದ್ದೇಕೆ?
ಕಾನ್ಪುರ,ನ.7: ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ತನ್ನ ಪ್ರತಿಭಟನೆಯ ಅಂಗವಾಗಿ ತನ್ನ ಮನೆಯ ಟೆರೇಸ್‌ನ ಮೇಲೆ ಪಾಕಿಸ್ತಾನಿ ಧ್ವಜವನ್ನು ಹಾರಿಸಿದ್ದಕ್ಕಾಗಿ ಕಾನ್ಪುರ ಜಿಲ್ಲೆಯ ಸಿಸಾಮಾವು ಪ್ರದೇಶದ ನಿವಾಸಿ ಚಂದ್ರಪಾಲ್ ಸಿಂಗ್(36) ಎಂಬಾತ ನನ್ನು ದೇಶದ್ರೋಹದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಂದ ಹಾಗೆ ಸಿಂಗ್ ಈ ಕೃತ್ಯವೆಸಗಿದ್ದಕ್ಕೆ ಕಾರಣವೇನು ಗೊತ್ತಾ? ಹಲವಾರು ತಿಂಗಳುಗಳಿಂದ ಆತನ ಮನೆಗೆ ಮಾಮೂಲಿಗಿಂತ ತೀರ ಹೆಚ್ಚಿನ ಮೊತ್ತದ ವಿದ್ಯುತ್ ಮತ್ತು ನೀರಿನ ಬಿಲ್‌ಗಳು ಬರುತ್ತಿವೆ. ಜೊತೆಗೆ ಮನೆಯ ತೆರಿಗೆಯನ್ನೂ ಸಿಕ್ಕಾಪಟ್ಟೆ ಹೆಚ್ಚಿಸಲಾಗಿದೆ. ಈ ಬಗ್ಗೆ ದೂರುಗಳನ್ನು ಸಲ್ಲಿಸಿದ್ದರೂ ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ. ಇದರಿಂದಾಗಿ ರೋಸಿ ಹೋಗಿದ್ದ ಆತ ತನ್ನ ಮನೆಯ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದ. ಹೀಗಾದರೂ ಸರಕಾರದ ಮತ್ತು ಜಿಲ್ಲಾಡಳಿತದ ಗಮನ ಸೆಳೆಯಲು ಪ್ರಯತ್ನಿಸಿದ್ದ.
ಆದರೆ ಸಿಂಗ್ ಗ್ರಹಚಾರವೇ ಸರಿಯಿಲ್ಲ. ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ ಕಾರ್ಯಕರ್ತರು ಆತನ ಮನೆಯ ಮುಂದೆ ಪ್ರತಿಭಟನೆ ನಡೆಸಿದ ನಂತರ ಪೊಲೀಸರು ಸ್ವಯಂಪ್ರೇರಿತರಾಗಿ ಆತನ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿಕೊಂಡು ಜೈಲಿಗಟ್ಟಿದ್ದಾರೆ.