×
Ad

ಮಾಜಿ ಯೋಧನ ಕುಟುಂಬಕ್ಕೆ ಒಂದು ಕೋ.ರೂ. ಪರಿಹಾರಕ್ಕೆ ವಿರೋಧ: ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2016-11-07 15:15 IST

ಹೊಸದಿಲ್ಲಿ,ನ.7: ‘ಸಮಾನ ಶ್ರೇಣಿ ಸಮಾನ ಪಿಂಚಣಿ(ಒಆರ್‌ಒಪಿ)’ ವಿಷಯದಲ್ಲಿ ನೊಂದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮಾಜಿ ಯೋಧ ರಾಮಕಿಶನ್ ಗ್ರೆವಾಲ್ ಅವರ ಕುಟುಂಬಕ್ಕೆ ಒಂದು ಕೋಟಿ ರೂ.ಪರಿಹಾರ ಮತ್ತು ಸರಕಾರಿ ಉದ್ಯೋಗ ವೊಂದನ್ನು ನೀಡುವ ದಿಲ್ಲಿಯ ಆಪ್ ಸರಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೇಲೆ ತನ್ನ ಆದೇಶವನ್ನು ಇಂದು ದಿಲ್ಲಿ ಉಚ್ಚ ನ್ಯಾಯಾಲಯವು ನ.14ಕ್ಕೆ ಕಾಯ್ದಿರಿಸಿದೆ.

ಮುಖ್ಯ ನ್ಯಾಯಾಧೀಶೆ ಜಿ.ರೋಹಿಣಿ ಮತ್ತು ನ್ಯಾ.ಸಂಗೀತಾ ಧಿಂಗ್ರಾ ಸೆಹಗಲ್ ಅವರ ಪೀಠದೆದುರು ಈ ಅರ್ಜಿಗಳನ್ನು ವಿರೋಧಿಸಿದ ದಿಲ್ಲಿ ಸರಕಾರದ ಪರ ವಕೀಲ ರಾಹುಲ್ ಮೆಹ್ರಾ ಅವರು, ಈ ಅರ್ಜಿಗಳಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿಗಳಿಲ್ಲ. ಸರಕಾರದ ನಿರ್ಧಾರವನ್ನು ಉಪ ರಾಜ್ಯಪಾಲರು ಅನುಮೋದಿಸಬೇಕಾಗಿದೆ. ಸಚಿವ ಸಂಪುಟವು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಅವರ ಒಪ್ಪಿಗೆ ಅಗತ್ಯವಾಗಿದೆ. ಹೀಗಾಗಿ ಈ ಅರ್ಜಿಗಳು ‘ಅಪಕ್ವ ’ವಾಗಿವೆ ಎಂದು ವಾದಿಸಿದರು.

ಅರ್ಜಿದಾರರ ಪೈಕಿ ವಕೀಲ ಅವಧ್ ಕೌಶಿಕ್ ಅವರು ಸಲ್ಲಿಸಿರುವ ಅರ್ಜಿಯು ಗ್ರೆವಾಲ್ ಅವರನ್ನು ‘ಹುತಾತ್ಮ ’ ಎಂದು ಘೋಷಿಸುವ ಆಪ್ ಸರಕಾರದ ನಿರ್ಧಾರವನ್ನೂ ವಿರೋಧಿಸಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆತ್ಮಹತ್ಯೆ ಕೃತ್ಯವನ್ನು ವೈಭವೀಕರಿಸಬಾರದಿತ್ತು ಎಂದು ಅವರು ಹೇಳಿದ್ದಾರೆ.

ಇನ್ನೋರ್ವ ಅರ್ಜಿದಾರ ಪೂರಣ್ ಚಂದ್ ಆರ್ಯ ಅವರ ಪರ ವಕೀಲ ಅಭಿಷೇಕ ಚೌಧರಿ ಅವರು,ಇದು ತೆರಿಗೆದಾರರ ಹಣವಾಗಿರುವುದರಿಂದ ಸರಕಾರವು ಹೀಗೆಲ್ಲ ಪರಿಹಾರವನ್ನು ನೀಡಬಾರದು ಎಂದು ವಾದಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ಬಳಿಕ ಪೀಠವು ತನ್ನ ಆದೇಶವನ್ನು ನ.14ಕ್ಕೆ ಕಾಯ್ದಿರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News