×
Ad

ನೀವು ಸರ್ವಾಧಿಕಾರಿಯೇ? ರುವಾಂಡ ಅಧ್ಯಕ್ಷರಿಗೆ ಪ್ರವಾಸಿ ಮಹಿಳೆಯ ಪ್ರಶ್ನೆ!

Update: 2016-11-08 19:27 IST

ಲಂಡನ್, ನ. 8: ಆಫ್ರಿಕ ಖಂಡದ ಪುಟ್ಟ ದೇಶ ರುವಾಂಡ ಎರಡು ದಶಕಗಳ ಹಿಂದೆ ನಡೆದ ಬೃಹತ್ ಮಾನವ ಮಾರಣ ಹೋಮಕ್ಕೆ ಕುಪ್ರಸಿದ್ಧ. ಅಲ್ಲಿ 1994ರಲ್ಲಿ ನಡೆದ ಆಂತರಿಕ ಸಂಘರ್ಷದಲ್ಲಿ, ಕೇವಲ 100 ದಿನಗಳಲ್ಲಿ ಸುಮಾರು 8 ಲಕ್ಷ ಟುಟ್ಸಿ ಜನಾಂಗೀಯರನ್ನು ಹತ್ಯೆ ಮಾಡಲಾಗಿತ್ತು. ಆದರೆ, ಆ ಬಳಿಕ ಆ ದೇಶ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ.

ಇಂಥ ದೇಶವೊಂದಕ್ಕೆ ಇತ್ತೀಚೆಗೆ ಕುಟುಂಬ ಸಮೇತ ಪ್ರವಾಸ ಹೋದ ಬ್ರಿಟನ್‌ನ ಮಹಿಳೆಯೊಬ್ಬರು, ನೇರವಾಗಿ ದೇಶದ ಅಧ್ಯಕ್ಷರಿಗೆ ಟ್ವಿಟರ್‌ನಲ್ಲಿ ಒಂದು ಅಪ್ರಿಯ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಅಧ್ಯಕ್ಷ ಪೌಲ್ ಕಗಮೆ ಉತ್ತರಿಸಿದ ರೀತಿಯೂ ವಿಶಿಷ್ಟವಾಗಿತ್ತು.

‘‘ನಿಮ್ಮ ದೇಶವನ್ನು ನೋಡಿ ನಮಗೆ ಸಂತೋಷವಾಗಿದೆ. ಆದರೆ, ನೀವು ಸರ್ವಾಧಿಕಾರಿ ಎಂದು ಹೇಳುವವರಿಗೆ ಏನು ಹೇಳುತ್ತೀರಿ?’’ ಎಂಬ ಪ್ರಶ್ನೆಯನ್ನು 56 ವರ್ಷ ವಯಸ್ಸಿನ ವೆಂಡಿ ಮರ್ಫಿ ರುವಾಂಡ ಅಧ್ಯಕ್ಷರ ಖಾಸಗಿ ಟ್ವಿಟರ್‌ನಲ್ಲಿ ಕೇಳಿದರು.

 ವೆಂಡಿ ತನ್ನ ಗಂಡ ಟಿಮ್ ಮತ್ತು ಮಗಳು ಎಲ್ ಜೊತೆ ಕಳೆದ ತಿಂಗಳ ಕೊನೆಯಲ್ಲಿ ರುವಾಂಡಕ್ಕೆ ಭೇಟಿ ನೀಡಿದ್ದರು. ಪ್ರಶ್ನೆ ಕೇಳಿ ಕೆಲವು ಗಂಟೆಗಳು ಕಳೆದವು. ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಈ ವಿಷಯ ಅಲ್ಲಿಗೇ ಮುಗಿಯಿತು ಎಂಬುದಾಗಿ ಅವರು ಭಾವಿಸಿದರು.
ಆದರೆ, ಅದಕ್ಕೆ ಅಧ್ಯಕ್ಷರು ಉತ್ತರಿಸಿದರು: ‘‘ಇದೇ ಪ್ರಶ್ನೆಯನ್ನು ಕೇಳುತ್ತಾ ದೇಶದೆಲ್ಲೆಡೆ ಸಂಚರಿಸಿ ಹಾಗೂ ಬಳಿಕ ನಿರ್ಧಾರಕ್ಕೆ ಬನ್ನಿ. ನಿಮ್ಮ ಅಭಿಪ್ರಾಯಕ್ಕೆ ವಿರುದ್ಧವಾದ ಅಭಿಪ್ರಾಯ ಹೊಂದಿರುವವರ ಬಗ್ಗೆ ನಿಮ್ಮ ಅಭಿಪ್ರಾಯ ಏನು?’’
‘‘ನಮಗೆ ದಂಗು ಬಡಿದಂತಾಯಿತು. ತಕ್ಷಣವೇ ಇತರ ರುವಾಂಡನ್ ವ್ಯಕ್ತಿಗಳಿಂದ ನಮಗೆ ಟ್ವೀಟ್‌ಗಳು ಬಂದವು. ಈಗಲೂ ಬರುತ್ತಾ ಇದೆ’’ ಎಂದು ವೆಂಡಿ ‘ದಿ ಇಂಡಿಪೆಂಡೆಂಟ್’ಗೆ ಹೇಳಿದ್ದಾರೆ.
ಬಳಿಕ ಓರ್ವ ಸಂಸದ ಹಾಗೂ ಓರ್ವ ಸರಕಾರಿ ಅಧಿಕಾರಿ ವೆಂಡಿ ಕುಟುಂಬವನ್ನು ಭೇಟಿಯಾದರು. ಎರಡು ಗಂಟೆಗಳ ಕಾಲ ಅವರು ಕುಟುಂಬದೊಂದಿಗೆ ಕಳೆದರು. ‘‘ಕೊಂಚ ತನಿಖಾ ರೀತಿಯಲ್ಲಿ ಆರಂಭವಾದ ಭೇಟಿ ಬಳಿಕ ಅತ್ಯಂತ ಉಲ್ಲಾಸಭರಿತ ಹಾಗೂ ಸಕಾರಾತ್ಮಕವಾಯಿತು. ಅಧ್ಯಕ್ಷ ಕಗಮೆಯ ಆಡಳಿತದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ವೆಂಡಿ ಕುಟುಂಬಕ್ಕೆ ಮಾಹಿತಿ ನೀಡಲಾಯಿತು’’.
ಕಗಮೆ ಕಳೆದ 22 ವರ್ಷಗಳಿಂದ ದೇಶದ ಪ್ರಭಾವಿ ಆಡಳಿತಗಾರನಾಗಿದ್ದಾರೆ. ಅವರ ವಿರುದ್ಧ ಹಲವು ಟೀಕೆಗಳು ಕೇಳಿ ಬಂದರೂ, ಅವರನ್ನು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್ ಕಿ ಮೂನ್, ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮುಂತಾದವರು ಶ್ಲಾಘಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News