‘‘2000 ರೂ. ಹೊಸ ನೋಟಿನಲ್ಲಿ ಜಿಪಿಎಸ್’’ : ಅಸಲಿಯತ್ತೇನು ?

Update: 2016-11-09 11:20 GMT

ಹೊಸದಿಲ್ಲಿ,ನ.9 : ಸದ್ಯದಲ್ಲಿಯೇ ಚಲಾವಣೆಗೆ ಬರಲಿದೆ ಎನ್ನಲಾದ ಹೊಸ 2000 ರೂ. ನೋಟಿನಲ್ಲಿ ಜಿಪಿಎಸ್ ಚಿಪ್ ಅಳವಡಿಸಲಾಗಿದ್ದು ಈ ಮೂಲಕ ಅಕ್ರಮ ಹಣ ವ್ಯವಹಾರಗಳ ಮೇಲೆ ಸರಕಾರ ನಿಗಾ ಇಡಬಹುದಾಗಿದೆಯೆಂಬ ಬಗೆಗಿನ ವದಂತಿಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಳ್ಳಿ ಹಾಕಿದ್ದು, ಇವುಗಳು ಕೇವಲ ‘ಕಲ್ಪನೆಯ ತುಣುಕುಗಳು’ ಎಂದು ಬಣ್ಣಿಸಿದೆ.

‘‘ಇಂತಹ ಒಂದು ತಂತ್ರಜ್ಞಾನ ಸದ್ಯ ಜಗತ್ತಿನಲ್ಲಿಯೇ ಇಲ್ಲವಾಗಿದೆ. ಹಾಗಿರುವಾಗ ಇಂತಹ ಒಂದು ತಂತ್ರಜ್ಞಾನವನ್ನು ನಾವು ಅಳವಡಿಸುವುದು ಹೇಗೆ ಸಾಧ್ಯ ?’’ ಎಂದು ರಿಸರ್ವ್ ಬ್ಯಾಂಕ್ ವಕ್ತಾರ ಅಪ್ಲನ ಕಿಲ್ಲವಾಲ ಹೇಳಿದ್ದಾರೆ.

‘‘ಆರ್ ಬಿ ಐ ವೆಬ್ ಸೈಟ್ ಈಗಾಗಲೇ ಹೊಸ ನೋಟಿನ ಸುರಕ್ಷಾ ಫೀಚರುಗಳನ್ನು ವಿವರಿಸಿದ್ದು ಇವುಗಳ ಹೊರತಾಗಿ ಬೇರೇನೂ ವಿಶೇಷತೆಯಿಲ್ಲ,’’ ಎಂದು ಅವರು ಸ್ಪಷ್ಟ ಪಡಿಸಿದರು.

ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಾ 500 ಹಾಗೂ 1000 ರೂ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದುಕೊಳ್ಳುವ ಸರಕಾರದ ನಿರ್ಧಾರವನ್ನು ಪ್ರಕಟಿಸಿದ ಸ್ವಲ್ಪವೇ ಹೊತ್ತಿನಲ್ಲಿ ಹೊಸ ಕರೆನ್ಸಿ ನೋಟುಗಳಲ್ಲಿ ಚಿಪ್ ಅಳವಡಿಸಲಾಗಿರುತ್ತದೆ ಎಂಬ ವದಂತಿ ಹರಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News