ಆಸ್ಟ್ರೇಲಿಯದಲ್ಲಿ ಹಫೀಝ್ ಬೌಲಿಂಗ್ ಶೈಲಿಯ ಪರೀಕ್ಷೆ

Update: 2016-11-09 17:25 GMT

ಇಸ್ಲಾಮಾಬಾದ್, ನ.9: ಅಮಾನತಿನಲ್ಲಿರುವ ಪಾಕಿಸ್ತಾನದ ಆಫ್ ಸ್ಪಿನ್ನರ್ ಮುಹಮ್ಮದ್ ಹಫೀಝ್ ಮುಂದಿನ ತಿಂಗಳಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿ ಶಂಕಾಸ್ಪದ ಬೌಲಿಂಗ್ ಶೈಲಿಗೆ ಸಂಬಂಧಿಸಿ ಪರೀಕ್ಷೆಗೆ ಒಳಗಾಗಲಿದ್ದಾರೆ.

ಬ್ರಿಸ್ಬೇನ್‌ನಲ್ಲಿ ನ.17 ರಂದು ಮುಹಮ್ಮದ್ ಹಫೀಝ್‌ರ ಬೌಲಿಂಗ್ ಶೈಲಿಯ ಪರೀಕ್ಷೆ ನಡೆಸಲಾಗುವುದು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಬುಧವಾರ ಹೇಳಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಹಫೀಝ್ ಅವರು ಬ್ರಿಸ್ಬೇನ್‌ನಲ್ಲಿರುವ ಐಸಿಸಿ ಮಾನ್ಯತೆ ಹೊಂದಿರುವ ಜೈವಿಕ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಗಾಗಬೇಕೆಂಬ ಬಯಕೆ ವ್ಯಕ್ತಪಡಿಸಿತ್ತು. ಒಂದು ವೇಳೆ ಹಫೀಝ್ ಶಂಕಾಸ್ಪದ ಬೌಲಿಂಗ್ ಶೈಲಿಯಲ್ಲಿ ದೋಷಮುಕ್ತವಾದರೆ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ಪಾಕ್ ತಂಡಕ್ಕೆ ವಾಪಸಾಗಲಿದ್ದಾರೆ.

ಪಾಕಿಸ್ತಾನ ಡಿ.15 ರಂದು ಬ್ರಿಸ್ಬೇನ್‌ನಲ್ಲಿ ಆರಂಭವಾಗಿರುವ ಆಸ್ಟ್ರೇಲಿಯ ವಿರುದ್ಧದ ಪ್ರಥಮ ಟೆಸ್ಟ್ ಆಡುವ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಆ ಬಳಿಕ ಐದು ಪಂದ್ಯಗಳ ಏಕದಿನ ಸರಣಿಯಲ್ಲೂ ಪಾಲ್ಗೊಳ್ಳಲಿದೆ.

12 ತಿಂಗಳಲ್ಲಿ ಎರಡನೆ ಬಾರಿ ಶಂಕಾಸ್ಪದ ಬೌಲಿಂಗ್ ಶೈಲಿಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಹಫೀಝ್ ವಿರುದ್ಧ ಐಸಿಸಿಯಿಂದ ಒಂದು ವರ್ಷ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು.

 ಹಫೀಝ್ ನ.14ಕ್ಕೆ ಬ್ರಿಸ್ಬೇನ್‌ಗೆ ತೆರಳುವ ನಿರೀಕ್ಷೆಯಿದ್ದು, ಪರೀಕ್ಷೆಯ ವರದಿಯು ಎರಡು ವಾರದೊಳಗೆ ಬಹಿರಂಗವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News