ದೇಶದಲ್ಲಿ ಉಪ್ಪಿಗೆ ಬರ ಬಂದಿದೆಯೇ?
ಹೊಸದಿಲ್ಲಿ, ನ.12: ದೇಶದಲ್ಲಿ ಉಪ್ಪಿಗೆ ಬರ ಇಲ್ಲ. ಜನಸಾಮಾನ್ಯರು ಧೃತಿಗೆಡುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
"22 ಅಗತ್ಯ ವಸ್ತುಗಳ ಬೆಲೆಯನ್ನು ಪ್ರತಿದಿನ ಪರಾಮರ್ಶಿಸಲಾಗುತ್ತಿದೆ. ದೇಶದ ವಿವಿಧೆಡೆಗಳಿಂದ ವರದಿಯಾದ ಬೆಲೆಯ ಹಿನ್ನೆಲೆಯಲ್ಲಿ, ಉಪ್ಪಿನ ಬೆಲೆ ಹೆಚ್ಚಳವಾಗಿಲ್ಲ" ಎಂದು ಗ್ರಾಹಕ ವ್ಯವಹಾರಗಳ ಖಾತೆ ಪ್ರಕಟಣೆ ಹೇಳಿದೆ. ದೇಶದ ವಿವಿಧೆಡೆ ಉಪ್ಪಿಗೆ ಬರ ಬಂದಿದೆ ಎಂಬ ವದಂತಿ ಹಬ್ಬಿ ಜನ ಖರೀದಿಯಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಸರಕಾರ ಈ ಸ್ಪಷ್ಟನೆ ನೀಡಿದೆ. ದೇಶದ ಕೆಲವೆಡೆ ಕೆಜಿಗೆ 250 ರೂಪಾಯಿ ದರದಲ್ಲೂ ಉಪ್ಪು ಮಾರಾಟವಾಗಿದೆ ಎಂದು ತಿಳಿದುಬಂದಿದೆ.
"ದೇಶದಲ್ಲಿ ಸರಾಸರಿ 220 ಟನ್ ಉಪ್ಪು ಉತ್ಪಾದನೆಯಾಗುತ್ತದೆ. ಈ ಪೈಕಿ ಕೇವಲ 60 ಟನ್ ಮಾತ್ರ ದೇಶೀಯವಾಗಿ ಬಳಕೆಯಾಗುತ್ತದೆ. ಉಳಿದ ಉಪ್ಪನ್ನು ಕೈಗಾರಿಕಾ ಬಳಕೆ ಹಾಗೂ ರಫ್ತಿಗೆ ಬಳಸಲಾಗುತ್ತದೆ. ಆದ್ದರಿಂದ ಯಾವ ಕೊರತೆಯೂ ಇಲ್ಲ. ಹಾಗೊಂದು ವೇಳೆ ಇದ್ದರೆ ಅದು ಸ್ಥಳೀಯ ಸಮಸ್ಯೆ" ಎಂದು ಗ್ರಾಹಕ ವ್ಯವಹಾರ ಇಲಾಖೆ ಪ್ರಕಟಣೆ ಹೇಳಿದೆ.
ಹಲವು ರಾಜ್ಯಗಳಲ್ಲಿ ಈ ವದಂತಿ ಹಬ್ಬಿದ್ದರಿಂದ ಜನ ಉಪ್ಪು ಖರೀದಿಗೆ ಮುಗಿಬಿದ್ದರು. ರಾಜಧಾನಿಯ ಕೆಲವೆಡೆಯೂ ಇಂಥ ಖರೀದಿ ಕಂಡುಬಂತು. ಇಂಥ ವದಂತಿ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.