ಕಪ್ಪು ಹಣ ಬಿಳಿ ಮಾಡಲು ಇವರಲ್ಲಿ ಎಂಥೆಂತಹಾ ಐಡಿಯಾಗಳು!
ಹೊಸದಿಲ್ಲಿ, ನ.12: ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದುಪಡಿಸಿದ ಬಳಿಕ ಕಪ್ಪುಹಣ ತಡೆ ಸಂಬಂಧ ಮಾಹಿತಿ ಕಲೆ ಹಾಕುತ್ತಿರುವ ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಕೆಲ ವಿಲಕ್ಷಣ ಅಂಶಗಳು ತಿಳಿದು ಬಂದಿವೆ. ಕಾಳಧನ ಹೊಂದಿರುವವರು ವಿನೂತನ ವಿಧಾನಗಳ ಮೂಲಕ ಕಪ್ಪುಹಣವನ್ನು ಪರಿವರ್ತಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.
ಮೊದಲನೆಯದಾಗಿ ಹಲವು ಉದ್ಯಮಿಗಳು ತಮ್ಮ ಉದ್ಯೋಗಿಗಳಿಗೆ ವೇತನವನ್ನು ಮುಂಗಡವಾಗಿ ನೀಡುತ್ತಿದ್ದಾರೆ. ಕೆಲವೆಡೆಯಂತೂ ಮುಂದಿನ ಒಂದು ವರ್ಷದ ವೇತನವನ್ನು ನಗದು ರೂಪದಲ್ಲಿ ಮುಂಗಡವಾಗಿ ನೀಡಲಾಗುತ್ತಿದೆ. ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಪ್ರವೃತ್ತಿ ಕಂಡುಬಂದಿದೆ. ಈ ಉದ್ಯೋಗಿಗಳು ತಮ್ಮ ಒಂದು ವರ್ಷದ ಮುಂಗಡ ವೇತನವನ್ನು ತಮ್ಮ ಖಾತೆಗಳಿಗೆ ಠೇವಣಿ ಮಾಡುತ್ತಿದ್ದಾರೆ.
ಎರಡನೆಯದಾಗಿ ಕೆಲ ವ್ಯಾಪಾರಿಗಳು ನವೆಂಬರ್ 8ಕ್ಕೆ ಮುನ್ನ ಆದ ವಹಿವಾಟಿನ ಹಣ ಎಂದು ಲೆಕ್ಕ ತೋರಿಸುತ್ತಿದ್ದಾರೆ. ಇನ್ನು ಕೆಲ ಸಗಟು ಮಾರಾಟಗಾರರು ತಮ್ಮ ಲೆಕ್ಕಪುಸ್ತಕದಲ್ಲಿ, ಕ್ಯಾಷ್ ಇನ್ ಹ್ಯಾಂಡ್ ಎಂದು ದೊಡ್ಡ ಮೊತ್ತವನ್ನು ತೋರಿಸುತ್ತಿದ್ದು, ಬಳಿಕ ಇದನ್ನು ಬ್ಯಾಂಕಿಗೆ ಜಮಾ ಮಾಡಲಾಗಿದೆ ಎಂದು ಸಮರ್ಥಿಸಕೊಳ್ಳುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದಾರೆ. ಎಷ್ಟು ಕಪ್ಪುಹಣ ಚಲಾವಣೆಯಲ್ಲಿದೆ ಎನ್ನುವುದು ಸರಕಾರಕ್ಕೆ ನಿಖರವಾಗಿ ತಿಳಿಯಲಿದೆ ಎಂದು ಉನ್ನತ ಮೂಲಗಳು ಹೇಳಿವೆ. ಆದರೆ ಅಂತಿಮ ಅಂಕಿ ಅಂಶ ಮಾರ್ಚ್ 31ರ ವೇಳೆಗಷ್ಟೇ ಲಭ್ಯವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಕೆಲವೆಡೆ ಇನ್ನೂ ವ್ಯಾಪಾರಿಗಳು, ಚಲಾವಣೆ ರದ್ದಾದ ಹಣವನ್ನು ಶೇಕಡ 90ರ ಮುಖಬೆಲೆಯಲ್ಲಿ ಖರೀದಿಸುತ್ತಿದ್ದಾರೆ. ಮೊದಲ ದಿನ ಇದು ಶೇಕಡ 60 ಆಗಿತ್ತು ಎಂದು ಮೂಲಗಳು ಹೇಳಿವೆ.