ತಾರಕಕ್ಕೇರಿದ ನೋಟಿನ ಸಂಕಟ: ನ್ಯಾಯಬೆಲೆ ಅಂಗಡಿ ಲೂಟಿ ಮಾಡಿದ ಜನರು
ಛತ್ತಾರ್ಪುರ, ನ.12: 500 ಹಾಗೂ 1000 ರೂಪಾಯಿ ನೋಟುಗಳ ಚಲಾವಣೆ ರದ್ದು ಮಾಡಿರುವ ಕೇಂದ್ರ ಸರಕಾರದ ಕ್ರಮದಿಂದ ಜನರ ಸಂಕಷ್ಟ ಮುಗಿಲು ಮುಟ್ಟಿದೆ. ನಗದು ಹಣದ ಕೊರತೆಯಿಂದ ಪಡಿತರ ಪಡೆಯಲೂ ಸಾಧ್ಯವಾಗದ ಜನ ಆಕ್ರೋಶಗೊಂಡು ನ್ಯಾಯಬೆಲೆ ಅಂಗಡಿಯನ್ನು ಲೂಟಿ ಮಾಡಿದ ಪ್ರಕರಣ ವರದಿಯಾಗಿದೆ.
ಇಲ್ಲಿಗೆ ಸಮೀಪದ ಬಾರ್ದಾ ಗ್ರಾಮದಲ್ಲಿ ಜನ ಸಿಟ್ಟಿಗೆದ್ದು, ಪ್ರತಿಭಟನಾರ್ಥವಾಗಿ ನ್ಯಾಯಬೆಲೆ ಅಂಗಡಿಯಲ್ಲಿದ್ದ ಧವಸ- ಧಾನ್ಯ ಲೂಟಿ ಮಾಡಿದರು. ನ್ಯಾಯಬೆಲೆ ಅಂಗಡಿ ಮಾಲೀಕ ಮುನ್ನಿಲಾಲ್ ಅಹಿರ್ವಾರ್ ಇದನ್ನು ಖಚಿತಪಡಿಸುತ್ತಾರಾದರೂ, ಪೊಲೀಸರು ಮಾತ್ರ, ಇಂಥ ಯಾವುದೇ ಘಟನೆನಡೆದಿಲ್ಲ ಎಂದು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಅದು ಕ್ಷುಲ್ಲಕ ಸಂಘರ್ಷ ಎಂದು ಪೊಲೀಸರು ಸಬೂಬು ಹೇಳುತ್ತಿದ್ದಾರೆ.
ಪಡಿತರ ಅಂಗಡಿ ಮಾಲೀಕ ಪಡಿತರ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಸಂಘರ್ಷ ನಡೆದಿದೆ ಎಂದು ಗ್ರಾಮದ ಸರಪಂಚ ನೋನೆಲಾಲ್ ಹೇಳಿದ್ದಾರೆ. ಆದರೆ ಗ್ರಾಮಸ್ಥರಿಗೆ ಈ ಅಂಗಡಿ ಮಾಲೀಕ ಕೆಲ ತಿಂಗಳಿಂದ ಸರಿಯಾಗಿ ಪಡಿತರ ನೀಡುತ್ತಿಲ್ಲ ಎಂಬ ಕಾರಣಕ್ಕೆ ಗ್ರಾಮಸ್ಥರು ವಾಗ್ವಾದಕ್ಕೆ ಇಳಿದರು ಎಂದು ಎಎಸ್ಐ ರಾಮ್ ಕಿಶೋರ್ ತಿವಾರಿ ವಿವರಿಸಿದ್ದಾರೆ.