ಫೇಸ್ ಬುಕ್ ಸ್ಥಾಪಕ ಝುಕರ್ಬರ್ಗ್ ಮೃತಪಟ್ಟಿದ್ದಾರೆಯೇ ?

Update: 2016-11-12 12:20 GMT

ಕ್ಯಾಲಿಫೋರ್ನಿಯ, ನ. 12: ತನ್ನ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಹಾಗೂ ಹಲವಾರು ಬಳಕೆದಾರರು ಮೃತಪಟ್ಟಿದ್ದಾರೆ ಎಂಬುದಾಗಿ 'ಫೇಸ್‌ಬುಕ್' ಶುಕ್ರವಾರ ಘೋಷಿಸಿತು!
ಬಳಿಕ ಎಚ್ಚೆತ್ತುಕೊಂಡ ಸಾಮಾಜಿಕ ಜಾಲತಾಣ ಕಂಪೆನಿ, ಈ ಸಂಬಂಧದ ತಾಂತ್ರಿಕ ದೋಷವನ್ನು ಸರಿಪಡಿಸಿತು ಹಾಗೂ ತಾನು 'ಭಯಾನಕ ತಪ್ಪು' ಮಾಡಿರುವುದಾಗಿ ಒಪ್ಪಿಕೊಂಡಿತು.
''ಸಂಸ್ಮರಣಾ ಪ್ರೊಫೈಲ್‌ಗಳಿಗಾಗಿ ಸಿದ್ಧಪಡಿಸಲಾಗಿದ್ದ ಸಂದೇಶವು ಇಂದು ಸ್ವಲ್ಪ ಹೊತ್ತು ತಪ್ಪಾಗಿ ಇತರ ಖಾತೆಗಳಿಗೆ ರವಾನೆಯಾಗಿದೆ'' ಎಂದು ಬಳಿಕ ಫೇಸ್‌ಬುಕ್ ವಕ್ತಾರರೊಬ್ಬರು ಶುಕ್ರವಾರ ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದರು.
''ಅದೊಂದು ಭಯಾನಿಕ ತಪ್ಪಾಗಿತ್ತು ಹಾಗೂ ನಾವು ಅದನ್ನು ಈಗ ಸರಿಪಡಿಸಿದ್ದೇವೆ'' ಎಂದರು.
ಪ್ರೊಫೈಲ್ ಪುಟಗಳಲ್ಲಿ ಸುಮಾರು 20 ಲಕ್ಷ ತಪ್ಪು ಸಂಸ್ಮರಣಾ ಸಂದೇಶಗಳು ರವಾನೆಯಾಗಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಫೇಸ್‌ಬುಕ್ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಝಕರ್‌ಬರ್ಗ್‌ರನ್ನೂ ಅವರ ಪ್ರೊಫೈಲ್ ಪುಟದಲ್ಲಿ ಹಾಕಿದ ಸಂದೇಶವೊಂದರಲ್ಲಿ ಸ್ಮರಿಸಲಾಯಿತು! ಅವರಿಗೆ ಶ್ರದ್ಧಾಂಜಲಿಯಾಗಿ ಜನರು ಶೇರ್ ಮಾಡುವ ಸಂದೇಶಗಳ ಮೂಲಕ ಅವರನ್ನು ಪ್ರೀತಿಸುವ ಜನರು ಸಮಾಧಾನ ಹೊಂದುತ್ತಾರೆ ಎಂದು ಸಂದೇಶ ಆಶಿಸುತ್ತದೆ.
ಈ ಪ್ರಮಾದಕ್ಕಾಗಿ ಫೇಸ್‌ಬುಕ್ ಜನರ ಕ್ಷಮೆ ಕೋರಿದೆ ಹಾಗೂ ಎಷ್ಟು ಸಾಧ್ಯವೋ ಅಷ್ಟು ಬೇಗ ಇದನ್ನು ಸರಿಪಡಿಸಲಾಯಿತು ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News