×
Ad

ನರೇಂದ್ರ ಬಾತ್ರಾ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ

Update: 2016-11-12 18:06 IST

ದುಬೈ, ನ.12: ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ನರೇಂದ್ರ ಬಾತ್ರಾ ಶನಿವಾರ ಆಯ್ಕೆಯಾಗಿದ್ದಾರೆ. ಬಾತ್ರಾ ಈ ಪ್ರತಿಷ್ಠಿತ ಹುದ್ದೆಗೇರಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ದುಬೈನಲ್ಲಿ ಶನಿವಾರ ಕೊನೆಗೊಂಡ 45ನೆ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಮತದಾನದಲ್ಲಿ ಬಾತ್ರಾ ಭಾರೀ ಮತಗಳ ಅಂತರದಿಂದ ಜಯಶಾಲಿಯಾದರು.

ಹಾಕಿ ಇಂಡಿಯಾದ ಅಧ್ಯಕ್ಷರೂ ಆಗಿರುವ ಬಾತ್ರಾ ಪ್ರತಿಸ್ಪರ್ಧಿಗಳಾದ ಐರ್ಲೆಂಡ್‌ನ ಡೇವಿಡ್ ಬಲ್ಬಿರ್ನಿ ಹಾಗೂ ಆಸ್ಟ್ರೇಲಿಯದ ಕೆನ್ ರೀಡ್‌ರನ್ನು ಸೋಲಿಸಿ ಎಫ್‌ಐಎಚ್‌ನ 12ನೆ ಅಧ್ಯಕ್ಷರಾಗಿ ಆಯ್ಕೆಯಾದರು. ಬಾತ್ರಾ ಎಫ್‌ಐಎಚ್ ಅಧ್ಯಕ್ಷ ಸ್ಥಾನ ಅಲಂಕರಿಸಿದ ಏಷ್ಯಾದ ಮೊದಲ ವ್ಯಕ್ತಿಯಾಗಿದ್ದಾರೆ.

 ಮತದಾನದಲ್ಲಿ ಬಾತ್ರಾ 68 ಮತಗಳನ್ನು ಬಾಚಿಕೊಂಡರೆ, ಡೇವಿಡ್ ಹಾಗೂ ರೀಡ್ ಕ್ರಮವಾಗಿ 29 ಹಾಗೂ 13 ಮತಗಳನ್ನಷ್ಟೇ ಪಡೆಯಲು ಸಮರ್ಥರಾದರು. ಇಲೆಕ್ಟ್ರಾನಿಕ್ ಮತದಾನದ ವ್ಯವಸ್ಥೆಯ ಮೂಲಕ ರಹಸ್ಯ ಮತದಾನದಿಂದ ಅಭ್ಯರ್ಥಿಯನ್ನು ಆರಿಸಲಾಯಿತು.

ನಿರ್ಗಮನ ಅಧ್ಯಕ್ಷ ಲಿಯಾಂಡ್ರೊ ನೆಗ್ರೆ ಅಧ್ಯಕ್ಷ ಚುನಾವಣೆಯಲ್ಲಿ ಜಯ ಸಾಧಿಸಿದ ಅಭ್ಯರ್ಥಿಯ ಹೆಸರು ಘೋಷಿಸಿದರು. ಬಾತ್ರಾ ಗೆಲುವಿನ ಮೂಲಕ ವಿಶ್ವದಲ್ಲಿ ಏಷ್ಯಾಖಂಡ ಮೊದಲ ಬಾರಿ ಕ್ರೀಡಾಶಕ್ತಿಯಾಗಿ ಹೊರಹೊಮ್ಮಿತು. ಕಳೆದ ಒಂದು ದಶಕದಿಂದ ಯುರೋಪ್ ಖಂಡ ಅಂತಾರಾಷ್ಟ್ರೀಯ ಹಾಕಿಯಲ್ಲಿ ಆಳ್ವಿಕೆ ನಡೆಸಿತ್ತು.

59ರ ಹರೆಯದ ಬಾತ್ರಾ 2014ರ ಅಕ್ಟೋಬರ್‌ನಲ್ಲಿ ಹಾಕಿ ಇಂಡಿಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಬಾತ್ರಾರ ಉತ್ತರಾಧಿಕಾರಿ ನೆಗ್ರೆ 2008 ರಿಂದ ಎಫ್‌ಐಎಚ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News