ನಿಷೇಧಿತ ನೋಟುಗಳ ಪರ್ಯಾಯ ಬಳಕೆ ಹೇಗೆ?

Update: 2016-11-13 06:30 GMT

ಐನೂರು ಮತ್ತು ಒಂದು ಸಾವಿರ ರೂಪಾಯಿಯ ನೋಟುಗಳನ್ನು ನರೇಂದ್ರ ಮೋದಿಯವರು ತಮ್ಮ ಸರ್ಜಿಕಲ್ ಸ್ಟ್ರೈಕ್ ಮೂಲಕ ನಿಷೇಧಿಸಿದ್ದಾರೆ. ಹಾಗಾದರೆ ಮದುವೆಗೆ ಅಥವಾ ಇನ್ನಿತರ ಅಗತ್ಯಕ್ಕೆ ಯಾವುದೇ ದಾಖಲೆಗಳಿಲ್ಲದೆ ತಂದಿಟ್ಟ ಈ ನೋಟುಗಳನ್ನೆಲ್ಲ ಏನು ಮಾಡುವುದು? ಅನಗತ್ಯವಾಗಿ ಬ್ಯಾಂಕಿನ ಮುಂದೆ ಕ್ಯೂ ನಿಂತು ಸಮಯ ಕಳೆಯುವುದಕ್ಕಿಂತ ಅಥವಾ ಬ್ಯಾಂಕುಗಳಲ್ಲಿ ಕ್ಯೂ ನಿಂತು ಸಾರ್ವಜನಿಕರಿಗೆ ತೊಂದರೆ ಕೊಡುವುದಕ್ಕಿಂತ ಈ ಹಣವನ್ನು ಹೇಗೆ ಬೇರೆ ಬೇರೆ ರೀತಿಯಲ್ಲಿ ಉಪಯೋಗ ಮಾಡಬಹುದು ಎನ್ನುವುದರ ಕುರಿತಂತೆ ಕೇಂದ್ರ ಸರಕಾರ ವ್ಯಾಪಕ ಸಂಶೋಧನೆ ನಡೆಸುತ್ತಿದೆ.

ಈ ಸಂಶೋಧನೆಯಲ್ಲಿ ಪತಂಜಲಿ ಬಾಬಾ ರಾಮ್‌ದೇವ್ ಸಹಿತ ದೇಶದ ವಿವಿಧ ಗಣ್ಯರು, ತಜ್ಞರು, ಆರೆಸ್ಸೆಸ್ ಮುಖಂಡರು ಭಾಗವಹಿಸಿದ್ದಾರೆ. ಆದುದರಿಂದ ಮನೆಯಲ್ಲಿ ಯಾರಾದರೂ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ತಂದಿಟ್ಟವರು ಕಂಗೆಡುವ ಅಗತ್ಯವಿಲ್ಲ ಎಂದು ಕೇಂದ್ರ ಸರಕಾರ ಮಧ್ಯ ರಾತ್ರಿ ತನ್ನ ಪ್ರಕಟಣೆಯನ್ನು ಹೊರಡಿಸಿದೆ. ಈ ನೋಟುಗಳನ್ನು ಬೇರೆ ಬೇರೆ ರೀತಿಯಲ್ಲಿ ಹೇಗೆ ಉಪಯುಕ್ತವಾಗಿ ಬಳಸಬಹುದು ಎನ್ನುವುದರ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ನೀಡಲಾಗಿದೆ.
***
ಮದುವೆ ಕಾರ್ಯಕ್ರಮಕ್ಕೆ ತಂದ ಹಣ:
ನೀವು ಮನೆಯಲ್ಲಿ ಮದುವೆ ಕಾರ್ಯಕ್ರಮಕ್ಕೆಂದು ಹಣ ತಂದಿದ್ದೀರಿ. ಆದರೆ ಇದೀಗ 500 ಮತ್ತು ಒಂದು ಸಾವಿರ ರೂ. ನೋಟುಗಳು ನಿಷೇಧವಾಗಿವೆೆ. ಒಂದು ದಿನದೊಳಗೆ ಮದುವೆ. ನೋಟುಗಳನ್ನು ಬ್ಯಾಂಕುಗಳಿಗೆ ಏಕಾಏಕಿ ತಲುಪಿಸಿ ಬದಲಿಸಲು ಸಾಧ್ಯವಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ಅದನ್ನು ಬದಲಾಯಿಸಿದರೆ ದಂಡವಾಗುವ ಅಪಾಯವಿದೆ. ಆದರೆ ಅದಕ್ಕಾಗಿ ನೀವು ಚಿಂತಿಸಬೇಕಾಗಿಲ್ಲ. ಮದುವೆ ಕಾರ್ಯಕ್ರಮಗಳಿಗಾಗಿ ತಂದ ನೋಟುಗಳನ್ನು ಮದುವೆ ಕಾರ್ಯಕ್ರಮಗಳಿಗಾಗಿಯೇ ಬಳಸಬಹುದು.
 
 ಮುಖ್ಯವಾಗಿ ಸಾವಿರ ಮತ್ತು ಐನೂರು ರೂ. ನೋಟುಗಳು ಬಣ್ಣ ಬಣ್ಣಗಳಿಂದ ಕೂಡಿರುವುದರಿಂದ ಅವುಗಳನ್ನು ಮಾಲೆಗಳಲ್ಲಿ ಪೋಣಿಸಿ, ಹೆಬ್ಬಾಗಿಲಲ್ಲಿ ತೋರಣ ಕಟ್ಟಬಹುದು. ಯಾವುದೇ ಬಣ್ಣದ ಕಾಗದಗಳಿಗಿಂತ ತುಂಬಾ ಸುಂದರವಾಗಿ ನಿಮ್ಮ ಹೆಬ್ಬಾಗಿಲು ಕಂಗೊಳಿಸಿ, ಮದುವೆ ಮನೆಗೆ ಅತ್ಯಂತ ಆಕರ್ಷಣೀಯವಾಗುತ್ತದೆ. ಮದುವೆಗಳಿಗೆ ಹೂವಿನ ಹಾರ ಬಳಸುವ ಬದಲು ನೋಟುಗಳ ಹಾರವನ್ನೇ ಉಪಯೋಗಿಸಬಹುದು. ‘ನೋಟು ನಿಷೇಧ’ದ ಕುರಿತಂತೆ ಮಾಹಿತಿ ಇಲ್ಲದ ಜನರು ನಿಮ್ಮ ಕೆಲಸಕ್ಕೆ ದಿಗ್ಮೂಢರಾಗುವ ಸಾಧ್ಯತೆಗಳಿವೆ. ಹಾಗೆಯೇ ಮದುಮಗಳನ್ನು ಶೃಂಗರಿಸಲು ಕೂಡ ನೋಟುಗಳನ್ನು ಸೃಜನಶೀಲವಾಗಿ ಬಳಸಬಹುದು. ಇವೆಲ್ಲಗಳ ಬಳಿಕವೂ ನೋಟುಗಳು ಉಳಿದರೆ ಹೊರಗಡೆಯಿರುವ ಒಲೆಯಲಿ ಬೆಂಕಿ ಕಾಯಿಸಲು ಈ ನೋಟುಗಳು ಪರಿಣಾಮಕಾರಿ. ನೋಟುಗಳು ಉರಿಯುವಾಗ ವಿವಿಧ ಬಣ್ಣಗಳನ್ನು ಹೊರಚೆಲ್ಲುವುದರಿಂದ ಮದುವೆಯ ಸಮಾರಂಭ ಇನ್ನಷ್ಟು ಕಳೆಗಟ್ಟುತ್ತದೆ. ಹಣದ ಕೊರತೆಯಿಂದ ಮದುವೆ ನಿಂತುಹೋದರೆ ಈ ನೋಟುಗಳ ಮೂಲಕವೇ ಮದುಮಗಳು ಮತ್ತು ಅವಳ ತಂದೆ ತಾಯಿಯರು ಕಣ್ಣೀರು ಒರೆಸಬಹುದು. ನೀರು ತಾಕಿದರೂ ನೋಟುಗಳು ಹರಿದು ಹೋಗದ ಕಾರಣ ಇದರಿಂದ ಸಿಂಬಳ ಒರೆಸುವುದಕ್ಕೂ ಬಳಸಬಹುದಾಗಿದೆ. ಚಳಿಗಾಲದ ಸಮಯವಾಗಿರುವುದರಿಂದ ಮನೆಯ ಕುಟುಂಬಸ್ಥರೆಲ್ಲರು ಬೆಳ್ಳಂಬೆಳಗ್ಗೆ ಮನೆಯಂಗಳದಲ್ಲಿ ಚಳಿ ಕಾಯಿಸಲು ಇದನ್ನು ಬಳಸಬಹುದು.


ಆಹಾರಗಳಿಗೆ ಬಳಸುವ ರೀತಿ:
  ಮನೆಯಲ್ಲಿ ಐನೂರು, ಸಾವಿರ ರೂಪಾಯಿಗಳ ನೋಟುಗಳಿವೆ. ಆದರೆ ಅಕ್ಕಿ, ಬೇಳೆಯಿಲ್ಲ. ನೀವು ಚಿಂತಿಸುವ ಅಗತ್ಯವಿಲ್ಲ. ನೀರನ್ನು ತೆಗೆದು ನೀವು ಚೆನ್ನಾಗಿ ಕುದಿಸಿ. ಕುದ್ದಿಯುತ್ತಿರುವ ಹಾಗೆಯೇ ಹತ್ತಿಪ್ಪತ್ತು ಒಂದು ಸಾವಿರದ ರೂಪಾಯಿಯ ನೋಟನ್ನು ಹಾಕಿ. ಈಗ ಸೌಟಿನಲ್ಲಿ ಚೆನ್ನಾಗಿ ತಿರುಗಿಸಿ. ರೂಪಾಯಿ ಕುದಿಯುತ್ತಿರುವ ಹಾಗೆಯೇ ಕೆಲವು ಐನೂರು ರೂಪಾಯಿಗಳನ್ನು ಅದಕ್ಕೆ ಹಾಕಿ ಮತ್ತೆ ಸೌಟಿನಿಂದ ತಿರುಗಿಸತೊಡಗಿ. ಈಗ ರೂಪಾಯಿಯ ಪರಿಮಳ ಮನೆಯಿಡೀ ಗಮಗಮಿಸತೊಡಗುತ್ತದೆ. ರುಚಿಗೆ ತಕ್ಕಷ್ಟು ಹಳೆಯ ಒಂದು ರೂಪಾಯಿಯ ಹರಿದ ನೋಟುಗಳನ್ನೂ ಹಾಕಬಹುದು. ಸ್ವಲ್ಪ ಹೊತ್ತಲ್ಲೇ ಒಲೆಯಿಂದ ಕೆಳಗಿಡಿ. ನೀವು ನಿಮ್ಮ ಮಕ್ಕಳು ಬಿಸಿ ಬಿಸಿಯಿದ್ದಾಗಲೇ ಇದನ್ನು ತಿಂದು ಮಲಗಿ. ಅತ್ಯಂತ ಪೌಷ್ಟಿಕಾಂಶವುಳ್ಳ ಆಹಾರ ಎಂದು ಪತಂಜಲಿ ಗುರು ರಾಮ್‌ದೇವ್ ಕೂಡ ಇದಕ್ಕೆ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಗೋವಿನ ಮೂತ್ರ, ಸೆಗಣಿ ಇತ್ಯಾದಿಗಳನ್ನು ಮಿಶ್ರ ಮಾಡಿದರೆ ಆಹಾರದ ಜೊತೆಗೆ ಆರೋಗ್ಯವೂ ನಿಮ್ಮದಾಗುತ್ತದೆ ಎಂದು ರಾಮ್‌ದೇವ್ ಶಿಫಾರಸು ಮಾಡಿದ್ದಾರೆ.


ಮಕ್ಕಳಿಗಾಗಿ ಬಳಕೆ:
 
ಮಕ್ಕಳ ಶಾಲೆ, ಓದು, ಅವರ ಭವಿಷ್ಯದ ಹೆಸರಲ್ಲಿ ನೋಟುಗಳನ್ನು ತಂದಿರಿಸಿದ್ದಿದ್ದರೆ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ಮಕ್ಕಳಿಗಾಗಿಯೇ ಪರ್ಯಾಯವಾಗಿ ಬಳಸುವ ದಾರಿಗಳು ಇಲ್ಲಿವೆ. ಮಕ್ಕಳಿಗೆ ಸಾಧಾರಣವಾಗಿ ಈ ನೋಟುಗಳು ನಿಷೇಧವಾಗಿರುವುದು ಗೊತ್ತಿರುವುದಿಲ್ಲ. ಅವರಿಗೆ ಈ ನೋಟುಗಳನ್ನು ಕೊಟ್ಟು ಅವರು ಸಂಗ್ರಹಿಸಿಟ್ಟಿರುವ ಪಿಗ್ಮಿ ಡಬ್ಬಿಗಳನ್ನು ನೀವು ಪಡೆದುಕೊಂಡು ಅದರಲ್ಲಿರುವ ನಾಣ್ಯಗಳನ್ನು ನೀವು ಸದ್ಬಳಕೆ ಮಾಡಬಹುದು. ಹಾಗೆಯೇ ದೀಪಾವಳಿಯ ಸಂದರ್ಭದಲ್ಲಿ ಸುರುಸುರು ಬತ್ತಿ ಉರಿಸುವ ಬದಲು ಈ ಹಣವನ್ನೇ ಹೊತ್ತಿಸಿ, ಆಗ ಹೊರಹೊಮ್ಮುವ ವಿವಿಧ ಬಣ್ಣಗಳನ್ನು ಮಕ್ಕಳಿಗೆ ತೋರಿಸಿ ಅವರನ್ನು ಮೋಸಮಾಡಬಹುದು. ಹಾಗೆಯೇ, ಈ ನೋಟುಗಳ ಮೂಲಕ ದೋಣಿ, ಗಿರಿಗಿಟ್ಲಿ ಮೊದಲಾದವುಗಳನ್ನು ಮಾಡುವುದಕ್ಕೆ ಅವಕಾಶವಿದೆ. ಈ ಕುರಿತಂತೆ ಸರಕಾರವೂ ವಿಶೇಷ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ. ಕಾರ್ಯಾಗಾರಕ್ಕೆ ಸಣ್ಣ ಮಟ್ಟದ ಶುಲ್ಕವನ್ನು ವಿಧಿಸಲಾಗಿದೆ. ಆದರೆ ಅದನ್ನು ಹೊಸ ನೋಟುಗಳ ಮೂಲಕ ಅಥವಾ ನೂರರ ನೋಟುಗಳ ಮೂಲಕವೇ ಪಾವತಿಸಬೇಕಾಗಿದೆ.

ಮೋದಿ ಅಭಿಮಾನಿಗಳಿಗಾಗಿ:
 ಮೋದಿ ಅಭಿಮಾನಿಗಳೂ ಬಹಳಷ್ಟು ನೋಟುಗಳನ್ನು ತಮ್ಮ ಮನೆಯಲ್ಲಿ ಇಟ್ಟಿರುವ ಸಾಧ್ಯತೆಗಳಿವೆ. ಅವರೂ ಚಿಂತಿಸುವ ಅಗತ್ಯವಿಲ್ಲ. ತಮ್ಮ ಮನೆಯಲ್ಲಿರುವ ಮೋದಿ ಭಾವ ಚಿತ್ರಗಳಿಗೆ ಪ್ರತಿ ದಿನ ಹೂವಿನ ಮಾಲೆಗಳನ್ನು ಹಾಕುವುದರಿಂದ ಮೋದಿಯವರು ವಿನಾಯಿತಿ ನೀಡಿದ್ದಾರೆ. ಬದಲಿಗೆ ಈ ನೋಟುಗಳನ್ನೇ ಮಾಲೆಯನ್ನಾಗಿಸಿ ತನ್ನ ಭಾವಚಿತ್ರಕ್ಕೆ ಹಾಕಿದರೆ ತಾನು ಪ್ರಸನ್ನನಾಗುತ್ತೇನೆ ಎಂದೂ ಭರವಸೆ ನೀಡಿದ್ದಾರೆ. ಇದು ತನ್ನ ಅಭಿಮಾನಿಗಳಿಗಾಗಿಯೇ ಟೋಕಿಯೋದಿಂದ ಪಿಟೀಲು ಬಾರಿಸುತ್ತಾ ಪ್ರಧಾನಿ ಮೋದಿಯವರು ನೀಡಿರುವ ಕೊಡುಗೆಯಾಗಿದೆ.


ಹಾಗೆಯೇ ತಮ್ಮ ಮೋದಿ ಭಜನೆಗಳನ್ನು ಈ ನೋಟುಗಳಲ್ಲಿರುವ ಖಾಲಿ ಜಾಗಗಳಲ್ಲಿ ಬರೆಯಬಹುದಾಗಿದೆ. ಎಲ್ಲ ನೋಟುಗಳಲ್ಲಿ ಮೋದಿ ಹೆಸರುಗಳನ್ನು ಬರೆದು ಅದನ್ನು ನರೇಂದ್ರ ಮೋದಿಯವರ ವಿಳಾಸಕ್ಕೆ ಕಳುಹಿಸುವ ಅವಕಾಶವನ್ನು ನೀಡಲಾಗಿದೆ. ಐನೂರರ ನೋಟುಗಳಲ್ಲಿ ಮೋದಿ ಜಪವನ್ನು ಮಾಡಿದರೆ ಏಳು ಬಾರಿ ತೀರ್ಥ ಯಾತ್ರೆ ಮಾಡಿದ ಪುಣ್ಯವು ಸಿಗುವುದು. ಹಾಗೆಯೇ ಸಾವಿರ ರೂಪಾಯಿಯ ನೋಟುಗಳಲ್ಲಿ ಮೋದಿ ಜಪ ಮಾಡಿದರೆ ಹಿಮಾಲಯವನ್ನು ಏರಿದ ಪುಣ್ಯ ಸಿಗುವುದು ಎಂದೂ ಮೋದಿ ತಮ್ಮ ಕೊಡುಗೆಯಲ್ಲಿ ಘೋಷಿಸಿದ್ದಾರೆ.

ರೈತರಿಗಾಗಿ: ರೈತರು ತಮ್ಮ ಭೂಮಿಯನ್ನು ಮಾರಿಯೋ ಅಥವಾ ಇನ್ನಿತರ ವ್ಯವಹಾರಗಳಿಂದಲೋ ತಂದ ಹಣ ಮನೆಯಲ್ಲಿದ್ದರೆ ಅದರ ಬಗ್ಗೆ ಕಣ್ಣೀರು ಹಾಕುವ ಅಗತ್ಯವಿಲ್ಲ. ನೇಣು ಹಾಕಿಕೊಳ್ಳುವ ಅಗತ್ಯವಂತೂ ಇಲ್ಲವೇ ಇಲ್ಲ. ಈ ನೋಟುಗಳನ್ನು ಗೊಬ್ಬರವಾಗಿ ಬಳಸುವ ಅವಕಾಶವಿದೆ ಎಂದು ಖ್ಯಾತ ಕೃಷಿ ವಿಜ್ಞಾನಿಗಳಾಗಿರುವ ಬಾಬಾರಾಮ್‌ದೇವ್ ತಿಳಿಸಿದ್ದಾರೆ. ಈ ನೋಟುಗಳಲ್ಲಿ ಅಪಾರ ಪ್ರಯೋಜನಗಳಿದ್ದು ಮರಗಳು ಅತಿ ಬೇಗ ಫಲಕೊಡುವ ಸಾಧ್ಯತೆಗಳು ಅತಿ ಹೆಚ್ಚಿವೆ ಎಂದೂ ತಿಳಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗಗಳು ಹೆಚ್ಚುತ್ತಿವೆ. ಆದರೆ ಅವರನ್ನು ಸುಡುವುದಕ್ಕೆ ಬೇಕಾದಷ್ಟು ಮರಗಳು ಸಿಗುತ್ತಿಲ್ಲ. ದೇಶಾದ್ಯಂತ ನಿಷೇಧಗೊಂಡಿರುವ ರೂಪಾಯಿ ನೋಟುಗಳನ್ನೆಲ್ಲ ಅವರ ಅಂತಿಮ ಸಂಸ್ಕಾರಕ್ಕೆ ಬಳಸಲು ಸರಕಾರ ಅನುವು ಮಾಡಿಕೊಡಲಿದೆ ಎಂದೂ ಕೃಷಿ ಸಚಿವರು ಘೋಷಿಸಿದ್ದಾರೆ. ನಿಷೇಧದ ಮೂಲಕ ರೈತರಿಗೆ ಭಾರೀ ಲಾಭಗಳಾಗುತ್ತಿವೆ ಎಂದೂ ತಿಳಿಸಿದ್ದಾರೆ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News