×
Ad

ನನ್ನನ್ನು ಜೀವಂತ ಸುಟ್ಟರೂ ಕಪ್ಪುಹಣದ ವಿರುದ್ಧ ಹೋರಾಟ ನಿಲ್ಲಿಸಲಾರೆ:ಮೋದಿ

Update: 2016-11-13 14:30 IST

ಪಣಜಿ,ನ.13: 500 ಮತ್ತು 1,000 ರೂ.ಗಳ ನೋಟುಗಳ ರದ್ದತಿ ಮತ್ತು ಕಪ್ಪುಹಣ ಕುರಿತಂತೆ ರವಿವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಹಂತದಲ್ಲಿ ಭಾವೋದ್ವೇಗಕ್ಕೊಳಗಾಗಿ ಅನಾಣ್ಯೀಕರಣದ ಸರಕಾರದ ನಿರ್ಧಾರದ ಟೀಕೆಗಳ ವಿರುದ್ಧ ಕಿಡಿಕಾರಿದಲ್ಲದೆ, ತನ್ನ ಜೀವಕ್ಕೆ ಬೆದರಿಕೆಗಳು ಬಂದರೂ ತಾನು ಮಣಿಯುವುದಿಲ್ಲ ಎಂದು ಹೇಳಿದರು.

ಗೋವಾದ ಮೋಪಾದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾತನಾಡುತ್ತಿದ್ದ ಅವರು ನೋಟುಗಳ ರದ್ದತಿ ಮತ್ತು ಬ್ಯಾಂಕುಗಳು ಹಾಗೂ ಎಟಿಎಂಗಳಿಗೆ ಜನರ ಮುತ್ತಿಗೆಯ ಕುರಿತು ಪ್ರಸ್ತಾಪಿಸಿ,ತನಗೂ ನೋವು ಅರ್ಥವಾಗುತ್ತಿದೆ. ಧಿಮಾಕಿನ ಪ್ರದರ್ಶನವಾಗಿ ಈ ಕ್ರಮಗಳನ್ನು ಕೈಗೊಂಡಿದ್ದಲ್ಲ ಎಂದರು.

ತಾನು ಬಡತನವನ್ನು ನೋಡಿದ್ದೇನೆ ಮತ್ತು ಜನರ ಸಮಸ್ಯೆಗಳು ತನಗೆ ಅರ್ಥ ವಾಗುತ್ತವೆ. ತಾನು ಪ್ರಧಾನಿ ಹುದ್ದೆಯಲ್ಲಿ ಕುಳಿತುಕೊಳ್ಳಲೆಂದೇ ಜನಿಸಿದವನಲ್ಲ ಎಂದ ಅವರು ಭಾವೋದ್ವೇಗಕ್ಕೊಳಗಾಗಿ ಮುಂದಕ್ಕೆ ಮಾತನಾಡಲಾಗದೆ ಕೆಲ ಕಾಲ ಮೌನವಾಗಿದ್ದರು. ಬಳಿಕ ನಡುಗುತ್ತಿದ್ದ ಧ್ವನಿಯಲ್ಲಿ ಮಾತು ಮಂದುವರಿಸಿದ ಅವರು, ತಾನೇನನ್ನು ಹೊಂದಿದ್ದೇನೋ,ತನ್ನ ಕುಟುಂಬ,ತನ್ನ ಮನೆ......ಎಲ್ಲವನ್ನೂ ದೇಶಕ್ಕಾಗಿ ತೊರೆದಿದ್ದೇನೆ ಎಂದರು. ಅಡಚಣೆಗಳನ್ನುಂಟು ಮಾಡುವ ಮತ್ತು ಕಿರುಕುಳವನ್ನು ನೀಡುವ ಮೂಲಕ ಮೋದಿಯನ್ನು ತಡೆಯಬಹುದೆಂದು ಅವರು ಭಾವಿಸಿದ್ದಾರೆ. ಇದಕ್ಕೆಲ್ಲ ತಾನು ಹೆದರುವುದಿಲ್ಲ. ಯಾರಾದರೂ ತನ್ನನ್ನು ಜೀವಂತ ಸುಟ್ಟರೂ ಕಪ್ಪುಹಣದ ವಿರುದ್ಧದ ಈ ಕ್ರಮಗಳನ್ನು ತಾನು ನಿಲ್ಲಿಸುವುದಿಲ್ಲ ಎಂದರು.

ತನ್ನ ವಿರುದ್ಧ ಹೊಂಚು ಹಾಕುತ್ತಿರುವ ಶಕ್ತಿಗಳ ಬಗ್ಗೆ ತನಗೆ ಗೊತ್ತು. ಅವರು ತನ್ನನ್ನು ಬದುಕಲು ಬಿಡದಿರಬಹುದು. ಅವರು 70 ವರ್ಷಗಳ ಕಾಲ ದೋಚಿದ್ದು ಈಗ ತೊಂದರೆಗೆ ಸಿಲುಕಿದೆ, ಹೀಗಾಗಿ ಅವರು ತನ್ನನ್ನು ನಾಶ ಮಾಡಬಹುದು. ಆದರೆ ಅದಕ್ಕೆ ತಾನು ಸಿದ್ಧನಾಗಿದ್ದೇನೆ ಎಂದು ಪ್ರಧಾನಿ ನುಡಿದರು.

 ಭ್ರಷ್ಟಾಚಾರದ ವಿರುದ್ಧ ಹೋರಾಟ ಸೇರಿದಂತೆ ಭಾರೀ ನಿರೀಕ್ಷೆಗಳೊಂದಿಗೆ ತನ್ನ ಸರಕಾರಕ್ಕೆ 2014ರಲ್ಲಿ ಪ್ರಬಲವಾದ ಜನಾದೇಶ ದೊರಕಿದೆ ಎಂದ ಅವರು, ವಿದೇಶಗಳಲ್ಲಿ ಗುಡ್ಡೆ ಹಾಕಲಾಗಿರುವ ಕಪ್ಪುಹಣವನ್ನು ಸ್ವದೇಶಕ್ಕೆ ವಾಪಸ್ ತರುವುದು ಸಾಮೂಹಿಕ ಕರ್ತವ್ಯವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News