×
Ad

ಡಿ.30ರವರೆಗೆ ಹಳೆಯ ನೋಟುಗಳ ಬಳಕೆಗೆ ಅವಕಾಶ ನೀಡಲು ಕೇಂದ್ರಕ್ಕೆ ಕೇರಳದ ಆಗ್ರಹ

Update: 2016-11-13 15:59 IST

ತಿರುವನಂತಪುರ,ನ.13: 500 ಮತ್ತು 1,000 ರೂ.ನೋಟುಗಳ ರದ್ದತಿಯಿಂದಾಗಿ ಜನರ ಪರದಾಟದ ಹಿನ್ನೆಲೆಯಲ್ಲಿ ಇಂದಿಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಡಿ.30ರವರೆಗೆ ಹಳೆಯ ನೋಟುಗಳ ಬಳಕೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿದರು.

 ದಿಲ್ಲಿಗೆ ವಿಮಾನವೇರುವ ಮುನ್ನ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯ ಸರಕಾರದ ಭಾವನೆಗಳು ಮತ್ತು ಅನಾಣ್ಯೀಕರಣದ ಬಳಿಕ ಉಂಟಾಗಿರುವ ಸ್ಥಿತಿಯ ಕುರಿತು ಕಳವಳಗಳನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ತಿಳಿಸುವುದಾಗಿ ಹೇಳಿದರು.

ಅನಾಣ್ಯೀಕರಣ ಘೋಷಣೆಯ ಬೆನ್ನಿಗೇ ವಿದೇಶ ಪ್ರವಾಸ ಕೆೈಗೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ ಅವರು, ದೇಶವು ಇಂತಹ ಕಠಿಣ ಸವಾಲನ್ನು ಎದುರಿಸುತ್ತಿದ್ದಾಗ ಮತ್ತು ಜನರು ಸಂಕಷ್ಟದಲ್ಲಿ ಸಿಲುಕಿದ್ದಾಗ ಮೋದಿ ವಿದೇಶದಲ್ಲಿದ್ದರು ಎಂದರು.

ನೋಟುಗಳ ರದ್ದತಿಯಿಂದಾಗಿ ಜನರು ಹೇಳತೀರಲಾಗದ ಸಂಕಷ್ಟದಲ್ಲಿದ್ದಾರೆ. ಯಾವುದೂ ಇನ್ನೂ ಕ್ರಮಬದ್ಧವಾಗಿಲ್ಲ. ಯಾವುದೇ ಸರಕಾರವು ಇಂತಹ ಅಸಡ್ಡೆಯ ನಿಲುವನ್ನು ತಳೆಯಬಾರದು ಎಂದ ಅವರು, ಜನರು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಹಳೆಯ ನೋಟುಗಳ ವಿನಿಮಯಕ್ಕೆ ಕೊನೆಯ ದಿನವಾಗಿರುವ ಡಿ.30ರವರೆಗೂ ಜನರು ತಮ್ಮ ವಹಿವಾಟುಗಳಿಗೆ ಅವುಗಳನ್ನು ಬಳಸಲು ಅವಕಾಶ ನೀಡಬೇಕು ಎಂದು ಕೇಂದ್ರವನ್ನು ಆಗ್ರಹಿಸಿದರು.

ಕಪ್ಪುಹಣವನ್ನು ತಡೆಯಲು ಅನಾಣ್ಯೀಕರಣ ಮಾಡಲಾಗಿದೆ ಎಂಬ ಕೇಂದ್ರದ ಹೇಳಿಕೆಯನ್ನು ಪ್ರಶ್ನಿಸಿದ ಅವರು, 500 ಮತ್ತು 1,000 ರೂ.ನೋಟುಗಳನ್ನು ನಿಷೇಧಿಸುವ ಬಗ್ಗೆ ಕಪ್ಪುಹಣ ಖದೀಮರಿಗೆ ಪೂರ್ವ ಮಾಹಿತಿಯಿತ್ತು ಎಂಬ ವರದಿಗಳಿವೆ ಎಂದು ಹೇಳಿದರು.

ಕಪ್ಪುಹಣವನ್ನು ಹೊಂದಿದವರಿಗೆ ಯಾವುದೇ ತೊಂದರೆಯಾಗಿಲ್ಲ, ಆದರೆ ಸಾಮಾನ್ಯ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದರು.

ಇಂತಹ ಪ್ರಮುಖ ನಿರ್ಧಾರವನ್ನು ಜಾರಿಗೊಳಿಸುವ ಮುನ್ನ ಸರಕಾರವು ಉತ್ತಮ ಸಿದ್ಧತೆಗಳನ್ನು ಮಾಡಿಕೊಂಡಿರಬೇಕಿತ್ತು ಮತ್ತು ವಹಿವಾಟುಗಳಿಗೆ ಸಾಕಷ್ಟು ಕರೆನ್ಸಿ ನೋಟುಗಳ ಲಭ್ಯತೆಯನ್ನು ಖಚಿತಪಡಿಸಲು ಸೂಕ್ತ ವ್ಯವಸ್ಥೆಯೊಂದನ್ನು ರೂಪಿಸಬೇಕಿತ್ತು ಎಂದು ಅವರು ಹೇಳಿದರು.

ಜನರ ಸಂಕಷ್ಟಗಳನ್ನು ತಗ್ಗಿಸಲು ತನ್ನ ಸರಕಾರವು ವಿದ್ಯುತ್,ಶಾಲೆ ಮತ್ತು ನೀರಿನ ಶುಲ್ಕಗಳನ್ನು ಹಳೆಯ ನೋಟುಗಳಲ್ಲೇ ಪಾವತಿಸಲು ನ.30ರವರೆಗೆ ಅವಕಾಶ ನೀಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News