×
Ad

ಅನಾಣ್ಯೀಕರಣ ಘೋರ ವೈಫಲ್ಯ: ದದ್ಲಾನಿ

Update: 2016-11-13 18:56 IST

ಮುಂಬೈ,ನ.13: 500 ಮತ್ತು 1,000 ರೂ.ನೋಟುಗಳನ್ನು ರದ್ದುಗೊಳಿಸಿರುವ ಕೇಂದ್ರದ ನಿರ್ಧಾರ ಮತ್ತು ಪರಿಣಾಮವಾಗಿ ಜನರು ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಅವರು, ನಿರ್ಧಾರ ಜಾರಿಯಲ್ಲಿನ ಅವ್ಯವಸ್ಥೆಗಾಗಿ ಸರಕಾರವನ್ನು ಟೀಕಿಸಿದ್ದಾರೆ.
ಸರಣಿ ಟ್ವೀಟ್‌ಗಳಲ್ಲಿ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಕಟು ಟೀಕಾಪ್ರಹಾರ ನಡೆಸಿರುವ ದದ್ಲಾನಿ,ಅನಾಣ್ಯೀಕರಣ ಯೋಜನೆಯು ಒಂದು ‘ತಮಾಷೆ ’ಯಾಗಿದೆ ಎಂದು ಕುಟುಕಿದ್ದಾರೆ.
2,00,000 ಎಟಿಎಂ ಯಂತ್ರಗಳ ಮೂಲಕ ಹೊಸ ನೋಟುಗಳು ವಿತರಣೆಯಾಗುವ ಮುನ್ನ ಅವುಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಬೇಕಿದೆ ಎನ್ನುವುದು ನಿಜವಾಗಿದ್ದರೆ ಈ ನೋಟು ನಿಷೇಧ ಕ್ರಮವು ಒಂದು ತಮಾಷೆಯಲ್ಲದೆ ಬೇರೇನೂ ಅಲ್ಲ ಎಂದು ಅವರು ಬರೆದಿದ್ದಾರೆ.
 ಟ್ವಿಟರ್ ಬಳಕೆದಾರನೋರ್ವನಿಗೆ ಉತ್ತರವಾಗಿ, ಈ ಅನುಷ್ಠಾನದ ಕ್ರಮವೇ ಯಾರಿಗೂ ಅರ್ಥವಾಗುತ್ತಿಲ್ಲ. ನೋಟುಗಳನ್ನು ನಿಷೇಧಿಸಿದಾಗ ಅದನ್ನು ಬೆಂಬಲಿಸಿದ್ದ ಮೊದಲಿಗರಲ್ಲಿ ನಾನೂ ಸೇರಿದ್ದೆ. ಆದರೆ ಈ ಯೋಜನೆ ಘೋರ ವೈಫಲ್ಯವಾಗಿದೆ ಎಂದಿರುವ ಅವರು, ಹೆಚ್ಚಿನವರಿಗೆ ರೈಲು ಟಿಕೇಟ್‌ಗಳನ್ನೂ ಖರೀದಿಸಲಾಗುತ್ತಿಲ್ಲ. 2,000 ರು.ನೋಟು ಇದ್ದರೂ ಚಿಲ್ಲರೆ ದೊರೆಯುವುದಿಲ್ಲ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News