×
Ad

ಆಸ್ಪತ್ರೆಯಿಂದ ಪ್ರಪ್ರಥಮ ಹೇಳಿಕೆ ನೀಡಿದ ಜಯಲಲಿತಾ

Update: 2016-11-14 09:02 IST

ಚೆನ್ನೈ, ನ.14: ಆಸ್ಪತ್ರೆ ಸೇರಿದ 50 ದಿನಗಳ ಬಳಿಕ ಇದೇ ಮೊಟ್ಟಮೊದಲ ಬಾರಿಗೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ರವಿವಾರ "ನಾನು ಮರುಹುಟ್ಟು ಪಡೆದಿದ್ದೇನೆ" ಎಂದು ಹೇಳಿಕೆ ನೀಡಿದ್ದಾರೆ.
"ತಮಿಳುನಾಡು, ಹೊರರಾಜ್ಯಗಳು ಹಾಗೂ ವಿಶ್ವದ ಹಲವೆಡೆಗಳಲ್ಲಿ ಜನತೆಯ ನಿರಂತರ ಪ್ರಾರ್ಥನೆಯಿಂದಾಗಿ, ನಾನು ಮರುಹುಟ್ಟು ಪಡೆದಿದ್ದೇನೆ. ಈ ಮಾಹಿತಿಯನ್ನು ನಿಮ್ಮ ಜತೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ" ಎಂದು ಬಹಿರಂಗ ಪತ್ರದಲ್ಲಿ ಅವರು ಹೇಳಿದ್ದಾರೆ. ಪಕ್ಷದ ಕೇಂದ್ರ ಕಚೇರಿಯಲ್ಲಿ ಜಯಲಲಿತಾ ಅವರ ಪ್ರಧಾನ ಕಾರ್ಯದರ್ಶಿ ಈ ಹೇಳಿಕೆಯನ್ನು ಬಿಡುಗಡೆ ಮಾಡಿದರು.
ಉಪಚುನಾವಣೆ ನಡೆಯುತ್ತಿರುವ ತಂಜಾವೂರು, ಅರವಕುರುಚಿ ಹಾಗೂ ತಿರುಪರರಿಕುಂದ್ರಮ್ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿರುವ ಅವರು, "ಮೂರೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ವಿಜಯದ ಸುದ್ದಿಯನ್ನು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.
"ಜನರ ಬಗೆಗೆ ನನಗೆ ಇನ್ನೂ ಪ್ರೀತಿ ಹಾಗೂ ಕಾಳಜಿ ಇದ್ದು, ಸದ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ನಾನು ಆಸ್ಪತ್ರೆ ಸೇರಿದ ಸುದ್ದಿ ಕೇಳಿ ಜನ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ನನಗೆ ಅತೀವ ದುಃಖವಾಗಿದೆ. ಪಕ್ಷದ ಭವಿಷ್ಯ ಹಾಗೂ ಪ್ರಗತಿಗಾಗಿ ನನಗೆ ಸಂಘಟನೆ ಬೇಕು" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News