"ನಿಮಗೆ 25 ಪೈಸೆ ಮಾತ್ರ ರದ್ದು ಮಾಡಲು ಸಾಧ್ಯವಾಯಿತು"
ಹೊಸದಿಲ್ಲಿ, ನ.14: ಹಳೆಯ 500 ಹಾಗೂ 1000 ರೂಪಾಯಿ ನೋಟುಗಳ ಚಲಾವಣೆ ರದ್ದತಿ ನಿರ್ಧಾರವನ್ನು ಟೀಕಿಸಿದ ಕಾಂಗ್ರೆಸ್ ಪಕ್ಷದ ಮೇಲೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
"ಕಾಂಗ್ರೆಸ್ ಪಕ್ಷ 25 ಪೈಸೆಯನ್ನು ರದ್ದು ಮಾಡಿದಾಗ ನಾವು ಏನಾದರೂ ಹೇಳಿದ್ದೇವೆಯೇ? ನಿಮ್ಮ ಧೈರ್ಯ ಕೇವಲ 25 ಪೈಸೆ ರದ್ದು ಮಾಡುವುದಕ್ಕಷ್ಟೇ ಸೀಮಿತ. ಆದರೆ ಅಧಿಕ ಮೌಲ್ಯದ ಕರೆನ್ಸಿಯ ಚಲಾವಣೆ ರದ್ದು ಮಾಡುವ ಧೈರ್ಯ ನಿಮಗೆ ಇರಲಿಲ್ಲ. ನಾವು ಅದನ್ನು ಮಾಡಿದ್ದೇವೆ. ಜನ ಒಂದು ಸರ್ಕಾರವನ್ನು ಆಯ್ಕೆ ಮಾಡಿದಾಗ, ಅದರಿಂದ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ" ಎಂದು ಮೋದಿ ಗುಡುಗಿದ್ದಾರೆ.
ಹಿಂದಿನ ಯುಪಿಎ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದ ಅವರು, "ಕಲ್ಲಿದ್ದಲು ಹಗರಣ, 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಶಾಮೀಲಾದವರು ಇಂದು 4,000 ರೂಪಾಯಿ ವಿನಿಮಯ ಮಾಡಿಕೊಳ್ಳಲು ಸಾಲಿನಲ್ಲಿ ನಿಂತಿದ್ದಾರೆ" ಎಂದು ಲೇವಡಿ ಮಾಡಿದರು. ಈಗ ತಕ್ಷಣಕ್ಕೆ ಕೆಲವು ಅನಾನುಕೂಲತೆಗಳು ಜನರಿಗೆ ಆದರೂ ಇದರ ಲಾಭವನ್ನು ಜನ ಪಡೆಯಲಿದ್ದಾರೆ ಎಂದು ಮೋದಿ ಸಮರ್ಥಿಸಿಕೊಂಡರು.
500 ರೂಪಾಯಿ ನೋಟುಗಳನ್ನು ಹತಾಶರಾಗಿ ಜನ 300 ರೂಪಾಯಿಗೆ ವಿನಿಮಯ ಮಾಡಿಕೊಳ್ಳಬೇಕಿಲ್ಲ ಎಂದು ಮನವಿ ಮಾಡಿದರು. ಜನ ಹೆಚ್ಚಾಗಿ ಕಾರ್ಡ್‌ಗಳ ಮೂಲಕ ವಹಿವಾಟಿಗೆ ಮುಂದಾಗುವಂತೆಯೂ ಕೋರಿದರು.