×
Ad

ಎಟಿಎಂನಲ್ಲಿ ಏಕೆ ನಿಮಗೆ ಹಣ ಸಿಗುತ್ತಿಲ್ಲ ? ಸಮಸ್ಯೆ ಆಗಿದ್ದೆಲ್ಲಿ ? ಇದಕ್ಕೆ ಪರಿಹಾರವೇನು ?

Update: 2016-11-14 10:43 IST

ಹೊಸದಿಲ್ಲಿ, ನ. 14 : 500 ಹಾಗು 1000ರೂ ನೋಟು ರದ್ದತಿ ಬಳಿಕ ಬ್ಯಾಂಕುಗಳ ಹಾಗೆ ಎಟಿಎಂಗಳ ಮುಂದಿನ ಸರತಿ ಸಾಲುಗಳು ಬೇಗ ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಎಟಿಎಂಗಳ ಪರಿಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ, ಅವುಗಳಲ್ಲಿ ಯಾವಾಗ ದುಡ್ಡಿರುತ್ತದೆ, ಯಾವಾಗ ಖಾಲಿಯಾಗುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಎಟಿಎಂ ಗಳು ಒಂದೋ ಬಂದ್ ಆಗಿರುತ್ತವೆ ಅಥವಾ ಅವುಗಳಲ್ಲಿ ಹಣ ಇರುವುದಿಲ್ಲ. 

ನಿಜವಾಗಿ ಇದಕ್ಕೆ ಕಾರಣ ತಾಂತ್ರಿಕ ಸಮಸ್ಯೆ. ಸಾಮಾನ್ಯವಾಗಿ ಎಟಿಎಂ ಗಳಲ್ಲಿ 3 ರಿಂದ 4 ವಿಭಾಗಳು ಇರುತ್ತವೆ. ಈ ವಿಭಾಗಗಳನ್ನು ಕ್ಯಾಸೆಟ್ ಎಂದೂ ಹೇಳಲಾಗುತ್ತದೆ. ಇವುಗಳಲ್ಲಿ 100, 500,1000 ಗಳ ನೋಟುಗಳನ್ನು ಹಾಕಲಾಗುತ್ತದೆ. ಕೆಲವು ಎಟಿಎಂ ಗಳಲ್ಲಿ  ಕೇವಲ ಎರಡು ಕ್ಯಾಸೆಟ್ ಗಳಿರುತ್ತವೆ. ಇಂತಹ ಪ್ರತಿ ಕ್ಯಾಸೆಟ್ ಗಳಲ್ಲಿ ನೋಟುಗಳ 22 ಪ್ಯಾಕೆಟ್ ಗಳನ್ನು ಇಡಲು ಸಾಧ್ಯವಿದೆ. ಪ್ರತಿ ಪ್ಯಾಕೆಟ್ ಗಳಲ್ಲಿ 100 ನೋಟುಗಳಿರುತ್ತವೆ. 

ಇವುಗಳಿಂದ ಯಾವುದೇ ನೋಟು ತೆಗೆಯಲು ಸಾಧ್ಯವಾಗುವಂತೆ ಎಟಿಎಂ ಯಂತ್ರದ ಪ್ರೋಗ್ರಾಮಿಂಗ್ ಮಾಡಲಾಗಿರುತ್ತದೆ. ಆದರೆ ಈಗ 500 ಹಾಗು 1000 ರೂ ನೋಟುಗಳು ರದ್ದು ಆಗಿರುವುದರಿಂದ ಕೇವಲ 100 ರ ನೋಟುಗಳನ್ನು ಹಾಕಲಾಗುತ್ತಿದೆ. ಹಾಗಾಗಿ ಈಗ ಯಾರಿಗಾದರೂ ಸಾವಿರ ರೂಪಾಯಿ ಬೇಕಾದರೆ 500 ಅಥವಾ 1000 ರೂ ನೋಟು ನೀಡುವ ಬದಲು ಎಟಿಎಂ ಆತನಿಗೆ 100 ರ ಹತ್ತು ನೋಟುಗಳನ್ನು ನೀಡುತ್ತದೆ. 

ಎಟಿಎಂ ನ ಎಲ್ಲ ಕ್ಯಾಸೆಟ್ ಗಳಲ್ಲಿ 100 ರ ನೋಟುಗಳನ್ನೇ ಹಾಕಿಟ್ಟರೆ ಒಂದು ಎಟಿಎಂ ನಲ್ಲಿ ಒಟ್ಟು 7.5 ಲಕ್ಷ ರೂಪಾಯಿ ಇರುತ್ತದೆ. ಆದರೆ 500 ಮತ್ತು  1000 ರೂ ನೋಟುಗಳನ್ನು ಹಾಕುತ್ತಿದ್ದಾಗ ಇದೇ ಎಟಿಎಂ ಗಳಲ್ಲಿ 40 ಲಕ್ಷ ರೂಪಾಯಿ ಲಭ್ಯವಿರುತ್ತಿತ್ತು. 

ಈಗ ಯಾವುದೇ ಎಟಿಎಂ ಯಂತ್ರಗಳಲ್ಲಿ ಹೊಸ 500 ಹಾಗು  2000 ರೂ ನೋಟುಗಳನ್ನು ಹಾಕಲು ಸಾಧ್ಯವಿಲ್ಲ . ಏಕೆಂದರೆ ಯಾವುದೇ ಎಟಿಎಂ ಗಳ ಕ್ಯಾಸೆಟ್ ನ ಆಕಾರ ಈ ಹೊಸ ನೋಟುಗಳ ಅಳತೆಗೆ ಸರಿ ಹೊಂದುವುದಿಲ್ಲ. ಏಕೆಂದರೆ ಈ ಹೊಸ ನೋಟುಗಳ ಆಕಾರ ಈ ಹಿಂದಿನ 500 ಅಥವಾ 1000 ರೂ ನೋಟುಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. 

ಇದನ್ನೇ ಮೊನ್ನೆ ವಿತ್ತ ಸಚಿವ ಅರುಣ್ ಜೇಟ್ಲಿಯವರು ಹೇಳಿದ್ದು. ಈ ಸಮಸ್ಯೆಯನ್ನು ಮೂರು ವಾರಗಳಲ್ಲಿ ಪರಿಹರಿಸುವುದಾಗಿ ಅವರು ಹೇಳಿದ್ದಾರೆ. ಎಟಿಎಂ ಗಳ ಸೇವೆಯ ಉಸ್ತುವಾರಿ ಹೊತ್ತ ಕಂಪೆನಿಗಳ ಪ್ರಕಾರ ಅವುಗಳಿಗೆ ಹೊಸ ನೋಟುಗಳ ವಿನ್ಯಾಸ, ಆಕಾರದ ವಿವರಗಳು ಈಗಾಗಲೇ ಸಿಕ್ಕಿದ್ದು ಆದಷ್ಟು ಬೇಗ ಈ ಕೆಲಸ ಪೂರ್ಣಗೊಳ್ಳಲಿದೆ. 

ಈ ಎಟಿಎಂ ಸೇವೆ ನೋಡಿಕೊಳ್ಳಲು ಒಟ್ಟು 40,000  ಮಂದಿ ಕೆಲಸ ಮಾಡುತ್ತಾರೆ. ಎಟಿಎಂ ಯಂತ್ರಗಳಿಗೆ ನಗದು ಹಾಕಲು ಒಟ್ಟು 8,800 ವಾಹನಗಳಿವೆ. ಇವರಿಗೆ ದೇಶಾದ್ಯಂತ 650 ಜಿಲ್ಲೆಗಳಲ್ಲಿ ಇರುವ 2.20 ಲಕ್ಷ ಎಟಿಎಂ ಗಳಿಗೆ ಹಣ ಹಾಕುವ ಹೊಣೆ ಇದೆ. 

ಇವರು ಎಟಿಎಂ ಗಳಿಂದ ಹಳೆಯ ಕರೆನ್ಸಿಗಳನ್ನು ಈಗಾಗಲೇ ತೆಗೆದು ಆಗಿದೆ. ಆದರೆ ಈಗ ಕೇವಲ 100 ರ ನೋಟುಗಳನ್ನು ಮಾತ್ರ ಹಾಕಲು ಅವರಿಗೆ ಸಾಧ್ಯವಾಗುತ್ತಿದೆ. ಇದರಿಂದಾಗಿ ಅರ್ಧಕ್ಕರ್ಧ ಎಟಿಎಂ ಗಳು ಕೆಲಸ ಮಾಡುತ್ತಿಲ್ಲ. 

ಹಲವೆಡೆ ಬ್ಯಾಂಕ್ ಅಧಿಕಾರಿಗಳಿಗೂ ಸರಕಾರದ ಈ ಹಠಾತ್ ನಿರ್ಧಾರ ಅಸಮಾಧಾನ ತಂದಿದೆ. ಹೆಸರು ಬಹಿರಂಗಪಡಿಸಲು ಒಪ್ಪದ ಅಧಿಕಾರಿಗಳು ಸರಕಾರ ನಮಗೆ ಈ ಬಗ್ಗೆ ವ್ಯವಸ್ಥೆ ಮಾಡಿಕೊಳ್ಳಲು ಸಮಯಾವಕಾಶ ನೀಡಬೇಕಿತ್ತು ಎಂದು ಹೇಳುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News