ಮನೆ ದರೋಡೆ ಪ್ರಕರಣದಲ್ಲಿ ಇಳಿಮುಖ
ಪುಣೆ,ನ.14: ಪುಣೆಯ ಪೊಲೀಸರು ಕಳೆದ ಐದು ದಿನಗಳಿಂದ ಪಿಂಪ್ರಿ-ಚಿಂಚ್ವಾಡ ನಗರದಲ್ಲಿ ಒಂದೇ ಒಂದು ಮನೆ ದರೋಡೆ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ.
ಅಪರಾಧ ಅಂಕಿ-ಅಂಶಗಳ ವಿಶ್ಲೇಷಣೆಯ ಪ್ರಕಾರ, ಎಲ್ಲ 39 ಪೊಲೀಸ್ ಠಾಣೆಗಳಲ್ಲಿ ಕಳೆದ 7 ತಿಂಗಳಲ್ಲಿ ಪ್ರತಿ ದಿನ ಐದರಿಂದ ಆರು ಮನೆಗಳಲ್ಲಿ ಕಳ್ಳರಿಂದ ದರೋಡೆ ನಡೆದ ಪ್ರಕರಣ ದಾಖಲಾಗಿತ್ತು. ಪೊಲೀಸ್ ಕಮಿಶನ್‌ರ ಕ್ರೈಮ್ ರಿಜಿಸ್ಟರ್‌ನಲ್ಲಿ ಪುಣೆ ಹಾಗೂ ಪಿಂಪ್ರಿ-ಚಿಂಚ್ವಾಡ ಪ್ರದೇಶದಲ್ಲಿ ಕಳೆದ ಐದಾರು ದಿನಗಳಿಂದ ಯಾವುದೇ ದರೋಡೆ ಪ್ರಕರಣ ವರದಿಯಾಗಿಲ್ಲ.
ನ.7 ರಂದು ಭಾರತಿ ವಿದ್ಯಾಪೀಠ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊನೆಯ ಬಾರಿ ಮನೆ ದರೋಡೆ ಪ್ರಕರಣ ನಡೆದಿತ್ತು. ಅಪರಿಚಿತ ವ್ಯಕ್ತಿಗಳು ಅಪಾರ್ಟ್‌ಮೆಂಟ್‌ನ ಬೀಗವನ್ನು ಒಡೆದು 75,000 ರೂ. ವೌಲ್ಯದ ನಗ-ನಗದು ಕಳವು ಮಾಡಿದ್ದಾಗಿ ಸಂಜಯ್ ಜಾಧವ್ ಎನ್ನುವವರು ದೂರು ನೀಡಿದ್ದರು.
ಬಾಗಿಲುಹಾಕಲ್ಪಟ್ಟ ಮನೆಯನ್ನೇ ಗುರಿಯಾಗಿಸಿ ಎಲೆಕ್ಟ್ರಾನಿಕ್ ವಸ್ತುಗಳು, ಚಿನ್ನ ಹಾಗೂ ಒಡವೆಗಳನ್ನು ಕಳವು ಮಾಡುವ ದರೋಡೆಕೋರರು ಮರುದಿನವೇ ಅದನ್ನು ಮಾರಾಟ ಮಾಡಿ ಹಣ ಪಡೆಯುತ್ತಾರೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಜನರು ಕೂಡ ಮನೆಯಲ್ಲಿದ್ದ ನಗದು ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡುತ್ತಿದ್ದಾರೆ.