×
Ad

500 ರೂ. ನೋಟಿಗಾಗಿ ಮಗುವಿಗೆ ಚಿಕಿತ್ಸೆ ನೀಡದ ಆರೋಪ: ಡಾ. ಶೀತಲ್ ಕಾಮತ್ ಪ್ರಕಾರ ನಿಜವಾಗಿ ಅಂದು ನಡೆದದ್ದೇನು ?

Update: 2016-11-14 13:15 IST

ಮುಂಬೈ,  ನ.14: ನವಜಾತ ಶಿಶುವೊಂದರ ಹೆತ್ತವರ ಬಳಿ ರದ್ದುಗೊಂಡಿರುವ 500 ರೂ. ನೋಟುಗಳಿರುವುದೆಂದು ತಿಳಿದು ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿ ಅದರ ಸಾವಿಗೆ ಕಾರಣರಾಗಿದ್ದಾರೆಂದು ಆರೋಪಿಸಿ ಇಲ್ಲಿನ ಗೋವಂಡಿಯಲ್ಲಿರುವ ಜೀವನ್ ಜ್ಯೋತ್ ಹಾಸ್ಪಿಟಲ್ ಎಂಡ್ ನರ್ಸಿಂಗ್ ಹೋಮ್ ವೈದ್ಯೆ ಡಾ. ಶೀತಲ್ ಕಾಮತ್ ಅವರ ವಿರುದ್ಧ ಮಗುವಿನ ತಂದೆ ಜಗದೀಶ್ ಶರ್ಮ ಪೊಲೀಸ್ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ವೈದ್ಯೆಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಆಸ್ಪತ್ರೆಗೆ ಮಗುವನ್ನು ದಾಖಲಿಸುವ ಮುನ್ನ ಹೆತ್ತವರು ನೀಡಬೇಕಾದ ಶುಲ್ಕವನ್ನು ಅವರು ಐನೂರು ರೂಪಾಯಿ ನೋಟುಗಳಲ್ಲಿ ಪಾವತಿಸಲು ಮುಂದಾದಾಗ ಅದನ್ನು ಆಸ್ಪತ್ರೆಯವರು ನಿರಾಕರಿಸಿದ್ದು, ಮರುದಿನ ಮಗು ಸಾವನ್ನಪ್ಪಿತ್ತು ಎಂದು ದೂರಲಾಗಿತ್ತು.
ಮೂಲಗಳಿಂದ ತಿಳಿದು ಬಂದಂತೆ ಮಗುವನ್ನು ಕಿರಣ್ ಎಂಬವರು ತಮ್ಮ ಮನೆಯಲ್ಲಿಯೇ ಸಂಬಂಧಿಗಳು ಹಾಗೂ ನೆರೆಹೊರೆಯವರ ಸಹಾಯದಿಂದ ಹೆತ್ತಿದ್ದರು. ಅದೊಂದು ಅವಧಿಪೂರ್ವ ಪ್ರಸವವಾಗಿತ್ತಲ್ಲದೆ ಮಗುವಿನ ತೂಕ ಕೂಡ ಬಹಳಷ್ಟು ಕಡಿಮೆ 1.6 ಕೆ.ಜಿ.ಯಿತ್ತೆನ್ನಲಾಗಿದ್ದು, ಪ್ರಸವ ಸಂದರ್ಭ ಕಿರಣ್ ಸಾಕಷ್ಟು ರಕ್ತ ಕೂಡ ಕಳೆದುಕೊಂಡಿದ್ದರು.
ಮುಂಬೈ ಮಿರರ್ ಪತ್ರಕರ್ತೆಯೊಬ್ಬರಿಗೆ ಡಾ ಶೀತಲ್ ಕಾಮತ್ ನೀಡಿದ ಸ್ಪಷ್ಟೀಕರಣ ಹೀಗಿತ್ತು. ‘‘ರೋಗಿ ಮನೆಯಲ್ಲೇ ಶೌಚಾಲಯದಲ್ಲಿ ನವೆಂಬರ್ 9 ರಂದು ಪ್ರಸವಿಸಿದ್ದು, ಮಗುವಿನ ತೂಕ 1.5 ಕೆ.ಜಿ.ಯಷ್ಟಾಗಿತ್ತು. ನನ್ನ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ನಿಯೋ ನೇಟಲ್ ಇಂಟೆನ್ಸಿವ್ ಕೇರ್ ಯುನಿಟ್) ಇಲ್ಲದ ಕಾರಣ ನಾನು ಪತ್ರವೊಂದನ್ನು ನೀಡಿ ತಾಯಿ ಮಗುವನ್ನು ಸಯಾನ್ ಆಸ್ಪತ್ರೆಗೆ ಸೇರಿಸುವಂತೆ ಹೇಳಿದ್ದೆ. ಆದರೆ ಪ್ರಾಯಶಃ ಅವರು ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಅದರ ಸ್ಥಿತಿ ವಿಷಮಿಸುವ ತನಕ ಕಾದಿದ್ದರು. ಎಲ್ಲಾ ಮುಗಿದು ಹೋದ ಮೇಲೆ ಪೊಲೀಸರು ಹಾಗೂ ಮಾಧ್ಯಮವನ್ನು ಸಂಪರ್ಕಿಸಲಾಗಿತ್ತು. ರೋಗಿಯೊಬ್ಬರಿಗೆ ಚಿಕಿತ್ಸೆ ನೀಡದೆ ಹೊರ ಕಳುಹಿಸುವವಳಲ್ಲ ನಾನು’’ ಎಂದು ವೈದ್ಯೆ ನೀಡಿದ ಹೇಳಿಕೆಯನ್ನು ನಂದಿತಾ ಐಯ್ಯರ್ ಎಂಬವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News