ಆರ್ಥಿಕ ಅರಾಜಕತೆ ಸೃಷ್ಟಿಸಿರುವ ಅನಾಣ್ಯೀಕರಣ:ಶಿವಸೇನೆ
ಮುಂಬೈ,ನ.14: ಕಪ್ಪುಹಣವನ್ನು ನಿರ್ಮೂಲಿಸುವಲ್ಲಿ ತನ್ನ ಜೊತೆ ಸಹಕರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಜನರಲ್ಲಿ ಮಾಡಿಕೊಂಡ ಭಾವುಕ ಮನವಿಯ ಹೊರತಾಗಿಯೂ ಅವರ ಕ್ರಮವನ್ನು ಕಟುವಾಗಿ ಟೀಕಿಸಿರುವ ಶಿವಸೇನೆಯು, ಅನಾಣ್ಯೀಕರಣವನ್ನು ದೇಶದಲ್ಲಿ ಆರ್ಥಿಕ ಅರಾಜಕತೆಯನ್ನು ಸೃಷ್ಟಿಸಿರುವ ‘ಪೈಶಾಚಿಕ ಮತ್ತು ಅವ್ಯವಸ್ಥಿತ ಕ್ರಮ’ ಎಂದು ಬಣ್ಣಿಸಿದೆ.
ಪ್ರಧಾನಿಯನ್ನು ಇನ್ನಷ್ಟು ತರಾಟೆಗೆತ್ತಿಕೊಂಡಿರುವ ಮಿತ್ರಪಕ್ಷ ಶಿವಸೇನೆಯು, ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಬದಲು ಮೋದಿಯವರು ಯಾವುದೇ ಕಪ್ಪುಹಣ ಹೊಂದಿರದ ಭಾರತೀಯ ಪ್ರಜೆಗಳ ಮೇಲೆ ದಾಳಿ ನಡೆಸಿ ಅವರಿಗೆ ನೋವನ್ನುಂಟು ಮಾಡಿದ್ದಾರೆ ಮತ್ತು ಕಪ್ಪುಹಣ ಹೊಂದಿರುವ ಕೆಲವೇ ಜನರು ಅದನ್ನು ವಿದೇಶಿ ಬ್ಯಾಂಕುಗಳಲ್ಲಿ ಸುರಕ್ಷಿತವಾಗಿರಿಸಿದ್ದಾರೆ. ಅವರ ವಿರುದ್ಧ ನೀವು ಯಾವ ಕ್ರಮವನ್ನು ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದೆ. ಅರಾಜಕತೆಯನ್ನು ಸಹಿಸಿಕೊಳ್ಳುತ್ತಿರುವುದಕ್ಕಾಗಿ ಜನರನ್ನು ವಂದಿಸುವ ಮೂಲಕ ಮೋದಿಯವರು ಅವರ ರಾಷ್ಟ್ರಪ್ರೇಮವನ್ನು ಅಣಕಿಸಿದ್ದಾರೆ ಎಂದು ಹೇಳಿದೆ.
125 ಕೋಟಿ ಭಾರತೀಯರು ಆಹಾರ-ನೀರು ಇಲ್ಲದೆ ಬಿರುಬಿಸಿಲಿನಲ್ಲಿ ಬ್ಯಾಂಕುಗಳೆದುರು ಸಾಲುಗಟ್ಟಿ ನಿಂತಿದ್ದಾರೆ. ಅವರು ಭವಿಷ್ಯದಲ್ಲಿ ನಿಮ್ಮನ್ನು ಬೆಂಬಲಿಸಬೇಕೆಂದು ನೀವು ಬಯಸುತ್ತೀದ್ದೀರಾ? ಜನರು ಬೀದಿಗಳಿಗೆ ಬರುವಂತೆ ಮಾಡುವ ಮೂಲಕ ಅವರು ನಿಮಗೆ ನೀಡಿದ್ದ ಆಶೀರ್ವಾದಗಳನ್ನು ಮರಳಿಸುತ್ತೀದ್ದೀರಾ? ಇದು ಅವರಿಗೆ ರಾಜಾರೋಷವಾಗಿ ಮಾಡುತ್ತಿರುವ ವಂಚನೆಯಾಗಿದೆ ಎಂದು ಶಿವಸೇನೆಯ ಮುಖವಾಣಿ ‘ಸಾಮನಾ’ದ ಇಂದಿನ ಸಂಚಿಕೆಯಲ್ಲಿನ ಸಂಪಾದಕೀಯ ಲೇಖನವು ಕುಟುಕಿದೆ.