×
Ad

ನೋಟು ನಿಷೇಧ ಎಫೆಕ್ಟ್ : ಮದುವೆಯಿಂದ ಮುಕ್ತಿಯವರೆಗೂ ಎಲ್ಲವೂ ಮುಂದೂಡಿಕೆ

Update: 2016-11-14 14:54 IST

ಅಹ್ಮದಾಬಾದ್,ನ.14: ಮದುವೆ ಮತ್ತು ಮುಕ್ತಿ ಇವೆಲ್ಲವೂ ದೇವರ ಕೈಯಲ್ಲಿದೆ ಎನ್ನುವುದು ವಾಡಿಕೆಯ ಮಾತು. ಆದರೆ ಅಹ್ಮದಾಬಾದ್ ನಗರದಲ್ಲೀಗ ಇವುಗಳನ್ನು ಭಾರತೀಯ ರಿಜರ್ವ್ ಬ್ಯಾಂಕಿನ ಅಧಿಕಾರಿಗಳು ನಿರ್ಧರಿಸುತ್ತಿರುವಂತಿದೆ. ಮಧ್ಯಾಹ್ನ ಮೂರು ಗಂಟೆಯ ಬಳಿಕ ಕೆಲಸ ಮಾಡಲು ಆರ್‌ಬಿಐ ನಿರಾಕರಿಸುತ್ತಿದ್ದರೆ, ತಮ್ಮ ಬದುಕೇ ಅಧ್ವಾನವೆದ್ದು ಹೋಗಿರುವ ಸಾರ್ವಜನಿಕರು ನಗದು ಹಣಕ್ಕಾಗಿ ಪರದಾಡುತ್ತಿದ್ದಾರೆ.

ಇನ್‌ಕಮ್ ಟ್ಯಾಕ್ಸ್ ಸರ್ಕಲ್‌ನಲ್ಲಿರುವ ಆರ್‌ಬಿಐ ಕಚೇರಿಯೆದುರು ಗುರುವಾರ ದಿಂದಲೇ ಸಾಲುಗಟ್ಟಿ ನಿಂತಿರುವ ಸಲ್ಮಾನ್ ಖಾನ್ ಪಠಾಣ್(24) ಮತ್ತು ಆತನ ಕುಟುಂಬ ಸದಸ್ಯರಿಗೆ ರವಿವಾರವಷ್ಟೇ ಕೇವಲ 4,000 ರೂ.ಗಳನ್ನು ವಿನಿಮಯದ ಮೂಲಕ ಪಡೆದುಕೊಳ್ಳಲು ಸಾಧ್ಯವಾಗಿದೆ. ‘‘ಮುಂದಿನ ರವಿವಾರ ನನ್ನ ಮದುವೆ,ಆದರೆ ಅದರ ತಯಾರಿಗಳಿನ್ನೂ ಆಗಬೇಕಿದೆ. ಟೇಲರ್ ಬಳಿಯಿಂದ ನನ್ನ ಮದುವೆಯ ಸೂಟ್ ಪಡೆದುಕೊಳ್ಳಲೂ ಸಾಧ್ಯವಾಗುತ್ತಿಲ್ಲ. ನನ್ನ ಬಳಿಯಿರುವ ಹಳೆಯ ನೋಟುಗಳಿಗೆ ಬೆಲೆಯಿಲ್ಲ,ಹೊಸ ನೋಟುಗಳು ಸಿಗುತ್ತಿಲ್ಲ. ಮದುವೆಯನ್ನು ಮುಂದೂಡದೆ ಬೇರೆ ದಾರಿಯೇ ಕಂಡುಬರುತ್ತಿಲ್ಲ ’’ ಎಂದಾತ ಅಲವತ್ತುಕೊಂಡ.

ಬುಧವಾರ ಹಸೆಮಣೆಯನ್ನೇರಬೇಕಿರುವ ದೇವ್ ಶರ್ಮಾ(25) ಮತ್ತು ಆತನ ಸೋದರ ಚೇತನ್ ಶರ್ಮಾ ರವಿವಾರ ಹಳೆಯ ನೋಟುಗಳನ್ನು ವಿನಿಮಯಿಸಿಕೊಳ್ಳಲು ಗಂಟೆಗಟ್ಟಲೆ ಕಾಲ ಸರದಿಯ ಸಾಲಿನಲ್ಲಿ ನಿಂತು ಬರಿಗೈಯಲ್ಲಿ ಮನೆಗೆ ಮರಳಿದ್ದಾರೆ. ಆರ್‌ಬಿಐ ಏನಾದರೂ ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕಾಗಿತ್ತು ಎಂದು ಚೇತನ ನಿರಾಶೆಯಿಂದ ಹೇಳಿದರು.

ಧರ್ಮೇಂದ್ರ ರಾಜಪೂತ್(40) ಅವರ ಗೋಳು ಯಾರಿಗೂ ಬೇಡ. ಕಳೆದ ವಾರ ನಿಧನರಾಗಿರುವ ತನ್ನ ಸಂಬಂಧಿಯ ಉತ್ತರ ಕ್ರಿಯೆಯನ್ನು ನೆರವೇರಿಸಿ ಅವರ ಆತ್ಮಕ್ಕೆ ಮುಕ್ತಿ ಕಾಣಿಸಲೂ ಕೈಯಲ್ಲಿ ಹಣವಿಲ್ಲದೆ ಒದ್ದಾಡುತ್ತಿರುವ ಅವರಿಗೆ ಸಾಧ್ಯವಾಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News