ನಕಲಿ 2,000 ರೂ.ನೋಟು ನೀಡಿ ಮದ್ಯದಂಗಡಿಗೆ ಪಂಗನಾಮ

Update: 2016-11-14 13:23 GMT

ಚೆನ್ನೈ,ನ.14: ಹೊಸದಾಗಿ ಬಿಡುಗಡೆಗೊಂಡಿರುವ 2000 ರೂ.ನೋಟು ವಂಚಕರಿಗೆ ವರದಾನವಾಗಿರುವಂತಿದೆ. ರಾಜ್ಯದ ತಿರುವಣ್ಣಾಮಲೈನಲ್ಲಿ ಕಾಯಂ ಕುಡುಕನೋರ್ವ ಸರಕಾರಿ ಸ್ವಾಮ್ಯದ ಮದ್ಯಮಾರಾಟ ಮಳಿಗೆ ಟಾಸ್ಮಾಕ್‌ಗೆ 2000 ರೂ.ನ ಝೆರಾಕ್ಸ ಪ್ರತಿಯನ್ನು ನೀಡಿ ಮದ್ಯವನ್ನು ಖರೀದಿಸಿದ್ದಲ್ಲದೆ,ಚಿಲ್ಲರೆಯನ್ನೂ ಮರಳಿ ಪಡೆದುಕೊಂಡು ಪಂಗನಾಮ ಹಾಕಿದ್ದಾನೆ. ತಿರುವಣ್ಣಾಮಲೈ ಬಳಿಯ ಮರುಥಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರವಿವಾರ ರಾತ್ರಿ ಪ್ರದೇಶದಲ್ಲಿ ವಿದ್ಯುತ್ ಕಡಿತವಿದ್ದು, ಗಿರಾಕಿ 2000 ರೂ.ಗಳ ಹೊಸನೋಟನ್ನು ನೀಡಿದಾಗ ಮಂದದೀಪದ ಬೆಳಕಿನಲ್ಲಿ ಅದನ್ನು ಸರಿಯಾಗಿ ಪರೀಕ್ಷಿಸಲು ಸೇಲ್ಸ್‌ಮನ್‌ಗೆ ಸಾಧ್ಯವಾಗಿರಲಿಲ್ಲ. ಗಿರಾಕಿ 200 ರೂ.ವೌಲ್ಯದ ಮದ್ಯವನ್ನು ಖರೀದಿಸಿ ಉಳಿದ 1,800 ರೂ.ಗಳನ್ನು ಪಡೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದ.

 ಇಂದು ಬೆಳಿಗ್ಗೆ ಟಾಸ್ಮಾಕ್‌ನ ಮ್ಯಾನೇಜರ್ ನಿನ್ನೆಯ ವ್ಯಾಪಾರದ ಹಣವನ್ನು ಬ್ಯಾಂಕಿಗೆ ಕಟ್ಟಲೆಂದು ತೆರಳಿದ್ದಾಗ ಈ ವಂಚನೆ ಬೆಳಕಿಗೆ ಬಂದಿದೆ. ಬ್ಯಾಂಕ್ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮ್ಯಾನೇಜರ್ ಮತ್ತು ಸೇಲ್ಸ್‌ಮನ್‌ನನ್ನು ವಿಚಾರಣೆಗೊಳಪಡಿಸಿದ ಬಳಿಕ ನಕಲಿ ನೋಟನ್ನು ವಶಪಡಿಸಿ ಕೊಂಡಿದ್ದಾರೆ.
ಅನಾಣ್ಯೀಕರಣದ ಬಳಿಕ ಹೊಸ ನೋಟುಗಳು ಚಲಾವಣೆಗೆ ಬಂದ ಬಳಿಕ ಇದು ಇಂತಹ ಎರಡನೇ ವಂಚನೆ ಪ್ರಕರಣವಾಗಿದೆ. ಶನಿವಾರವಷ್ಟೇ ಚಿಕ್ಕಮಗಳೂರಿನಲ್ಲಿ ವ್ಯಕ್ತಿಯೋರ್ವ ತರಕಾರಿ ಅಂಗಡಿಗೆ 2,000 ರೂ.ನೋಟಿನ ಝೆರಾಕ್ಸ್ ಪ್ರತಿಯನ್ನು ನೀಡಿ ಟೋಪಿ ಹಾಕಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News