ನೋಟು ರದ್ದತಿ ಆದೇಶ ಹಿಂತೆಗೆತ ಕುರಿತು ಪ್ರಧಾನಿ ಹೇಳಿದ್ದೇನು?
ಹೊಸದಿಲ್ಲಿ,ನ.15: ನೋಟು ವಿನಿಮಯ ಹಾಗೂ ಹಣ ಹಿಂಪಡೆಯುವಲ್ಲಿ ಎದುರಾಗುತ್ತಿರುವ ಸಂಕಷ್ಟಗಳು ಸಾರ್ವಜನಿಕ ಆಕ್ರೋಶವಾಗಿ ಪರಿವರ್ತನೆಯಾಗುವ ಸುಳಿವು ಸಿಕ್ಕಿರುವ ಹಿನ್ನೆಲೆಯಲ್ಲಿ, ದೇಶಾದ್ಯಂತ ಪಕ್ಷದ ಮುಖಂಡರು ಜನರಿಗೆ ಸಹಾಯಹಸ್ತ ಚಾಚುವ ಮೂಲಕ ವಿರೋಧ ಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಬೇಕು ಎಂದು ಕೇಂದ್ರ ಸರಕಾರ ಹಾಗೂ ಬಿಜೆಪಿ ಸೂಚನೆ ನೀಡಿವೆ.
ಕೇಂದ್ರದ ದಿಢೀರ್ ನಿರ್ಧಾರದ ಪರಿಣಾಮಕಾರಿ ಅನುಷ್ಠಾನ ಸುಲಲಿತವಾಗಿ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಮೋದಿಯವರ ಅಧ್ಯಕ್ಷತೆಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ಕರೆಯಲಾಗಿತ್ತು.
ಇಡೀ ದೇಶದ ಜನ ಈ ವಿಚಾರದಲ್ಲಿ ಸರಕಾರದ ಬೆಂಬಲಕ್ಕಿದ್ದಾರೆ ಎಂದು ಮೋದಿ, ಪಕ್ಷಾಧ್ಯಕ್ಷ ಅಮಿತ್ ಶಾ ಹಾಗೂ ಇತರ ಮುಖಂಡರ ಬಳಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. "ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದು ಬಿಜೆಪಿ 2014ರಲ್ಲಿ ಗಳಿಸಿದ ಜನಾದೇಶದ ವ್ಯಾಪ್ತಿಯಲ್ಲೇ ಸೇರಿದೆ" ಎಂದು ಪಕ್ಷದ ಮುಖಂಡರಿಗೆ ಸ್ಪಷ್ಟಪಡಿಸಿದರು ಎನ್ನಲಾಗಿದೆ.
ತನು, ಮನ ಹಾಗೂ ಧನ ಹೀಗೆ ಎಲ್ಲ ಆಯಾಮದಲ್ಲೂ ಸ್ವಚ್ಛ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಪಕ್ಷ ಚುನಾವಣೆಗೆ ಮುನ್ನವೇ ಜನರ ಮುಂದಿಟ್ಟಿತ್ತು ಎನ್ನುವುದನ್ನು ರಾಜ್ಯಗಳ ಮುಖಂಡರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮೋದಿ ಹಾಗೂ ಅಮಿತ್ ಶಾ ಪಕ್ಷದ ಮುಖಂಡರಿಗೆ ಸೂಚಿಸಿದರು.
ವಿರೋಧ ಪಕ್ಷಗಳ ಒತ್ತಡಕ್ಕೆ ಬಿಜೆಪಿ ಮಣಿಯಬಾರದು. ವಿರೋಧ ಪಕ್ಷಗಳು ಇದನ್ನು ವಿರೋಧಿಸಬಹುದು. ಆದರೆ ಜನ ನಮ್ಮ ಜತೆಗಿದ್ದಾರೆ. ಇಡೀ ದೇಶ ಇದನ್ನು ಸ್ವಾಗತಿಸಿದೆ ಎಂದು ಮೋದಿ ಪಕ್ಷದ ಸಂಸದರಿಗೆ ತಿಳಿಸಿದರು ಎಂದು ಮೂಲಗಳು ವಿವರಿಸಿವೆ.