ನೋಟು ನಿಷೇಧ ಎಫೆಕ್ಟ್:ಹಳೆಯ ನೋಟುಗಳನ್ನು ಬ್ಯಾಂಕ್ ಸಾಲಕ್ಕೆ ತುಂಬುತ್ತಿರುವ ಸುಸ್ತಿದಾರರು
ಕೊಚ್ಚಿ,ನ.15: ನೋಟು ನಿಷೇಧವು ದೇಶಾದ್ಯಂತ ಜನಸಾಮಾನ್ಯರನ್ನು ಕಂಗೆಡಿಸಿರುವ ಮಧ್ಯೆಯೇ ಈ ಕ್ರಮದ ಧನಾತ್ಮಕ ಪರಿಣಾಮವೊಂದು ನಿಧಾನಕ್ಕೆ ಬೆಳಕಿಗೆ ಬರುತ್ತಿದೆ. ಹಲವಾರು ಸುಸ್ತಿದಾರರು ತಮ್ಮ ಹಳೆಯ ಬ್ಯಾಂಕ್ ಸಾಲಗಳನ್ನು ತೀರಿಸಲು ದಿಢೀರ್ ಆಸಕ್ತಿ ತೋರಿಸುತ್ತಿದ್ದಾರೆ.
ನೋಟು ನಿಷೇಧ ಕ್ರಮದ ಬಳಿಕದ ಇತ್ತೀಚಿನ ಬೆಳವಣಿಗೆಗಳು ಬ್ಯಾಂಕುಗಳಿಗೆ ಸುಸ್ತಿಯಾಗಿರುವ ಹಲವಾರು ದೊಡ್ಡ ಸಾಲಗಳನ್ನು ವಸೂಲು ಮಾಡುವಲ್ಲಿ ಖಂಡಿತವಾಗಿಯೂ ನೆರವಾಗಲಿವೆ. ಸುಸ್ತಿದಾರರು ಹಳೆಯ ನೋಟುಗಳ ಮೂಲಕ ಸಾಲಗಳನ್ನು ತೀರಿಸಬಹುದು. ಅವರು ಮರುಪಾವತಿಯನ್ನು ಮಾಡದಿದ್ದರೆ ಕೆಟ್ಟ ಸಾಲಗಳು ಹಾಗೆಯೇ ಉಳಿದುಕೊಳ್ಳುತ್ತವೆ ಮತ್ತು ಅವರು ಮರುಪಾವತಿಸಿದರೆ ಸಾಲಬಾಧ್ಯತೆಯಿಂದ ಮುಕ್ತರಾಗುತ್ತಾರೆ. ಹೀಗಾಗಿ ಹೆಚ್ಚಿನ ಸುಸ್ತಿದಾರರು ಸಾಲ ತೀರಿಸುವ ಕಾಯಕದಲ್ಲಿ ತೊಡಗಿದ್ದಾರೆ. ಶುಕ್ರವಾರ ನಮ್ಮ ಲಕ್ನೋ ಶಾಖೆಯಲ್ಲಿ ದೊಡ್ಡ ಮೊತ್ತದ ಸಾಲವೊಂದು ವಸೂಲಾಗಿದೆ. ಬ್ಯಾಂಕಿಗೆ ಬಂದ ಸುಸ್ತಿದಾರ ನೇರವಾಗಿ ಮೂರು ಕೋಟಿ ರೂ.ಗಳನ್ನು ಪಾವತಿಸಿದ್ದಾನೆ. ಇವೆಲ್ಲವೂ 500 ಮತ್ತು 1,000 ರೂ.ನೋಟುಗಳಾಗಿದ್ದವು ಎಂದು ಧನಲಕ್ಷ್ಮಿ ಬ್ಯಾಂಕಿನ ಎಂಡಿ ಮತ್ತು ಸಿಇಒ ಜಿ.ಶ್ರೀರಾಮ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿ ದರು.
ಅತ್ತ ತಮಿಳುನಾಡಿನ ಸೌತ್ ಇಂಡಿಯನ್ ಬ್ಯಾಂಕಿನ ಶಾಖೆಯೊಂದರಿಂದ 50 ಲ.ರೂ ಸಾಲವನ್ನು ಪಡೆದುಕೊಂಡು ಸುಸ್ತಿದಾರನಾಗಿದ್ದ ವ್ಯಕ್ತಿ ಕೂಡ ಹಳೆಯ ನೋಟುಗಳನ್ನು ತಂದು ಒಂದೇ ಏಟಿಗೆ ಅಷ್ಟೂ ಸಾಲವನ್ನು ತೀರಿಸಿದ್ದಾನೆ.
ಇನ್ನೂ ಕೆಲವು ಬ್ಯಾಂಕುಗಳ ಶಾಖೆಗಳಲ್ಲಿ ಹಳೆಯ ಸಾಲಗಳನ್ನು ತೀರಿಸಿರುವುದು ವರದಿಯಾಗಿದೆ. ನೋಟು ನಿಷೇಧ ಕ್ರಮದಿಂದಾಗಿ ತಮ್ಮ ಅನುತ್ಪಾದಕ ಆಸ್ತಿಗಳ ಪ್ರಮಾಣ ಕರಗಲಿದೆ ಎಂದು ಹಲವು ಬ್ಯಾಂಕುಗಳು ನಿರೀಕ್ಷಿಸಿವೆ.