ಶೀಘ್ರದಲ್ಲೇ ಎಸ್ ಬಿಐ ಎಟಿಎಂಗಳಲ್ಲಿ 20 ರೂ. 50 ರೂ. ನೋಟುಗಳು ಲಭ್ಯ
ಮುಂಬೈ,ನ.15: ಬ್ಯಾಂಕುಗಳು ಮತ್ತು ಎಟಿಎಂಗಳಿಗೆ ನಿರಂತರ ನಗದು ಪೂರೈಕೆ ಯಿಂದಾಗಿ ಜನರಲ್ಲಿಯ ಆತಂಕ ಕಡಿಮೆಯಾಗುತ್ತಿದೆ ಎಂದು ಇಂದಿಲ್ಲಿ ಹೇಳಿಕೊಂಡ ಭಾರತೀಯ ಸ್ಟೇಟ್ ಬ್ಯಾಂಕಿನ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರು, ಸಾರ್ವಜನಿಕರಿಗೆ ಇನ್ನಷ್ಟು ನೆರವಾಗಲು ಬ್ಯಾಂಕು ಶೀಘ್ರವೇ 20 ಮತ್ತು 50 ರೂ.ನೋಟುಗಳ ವಿತರಣೆಯನ್ನು ಆರಂಭಿಸಲಿದೆ ಎಂದು ತಿಳಿಸಿದರು.
ದಕ್ಷಿಣ ಭಾರತದಲ್ಲಿನ ಎಲ್ಲ ಎಸ್‌ಬಿಐ ಶಾಖೆಗಳಲ್ಲಿ ಕೆಲಸದ ಒತ್ತಡ ಶೇ.50ರಷ್ಟು ತಗ್ಗಿದೆ ಮತ್ತು ಇದು ಜನರಿಗೆ ತಮ್ಮ ಅಗತ್ಯಕ್ಕೆ ತಕ್ಕಷ್ಟು ಹಣ ದೊರೆಯುತ್ತದೆ ಎಂಬ ವಿಶ್ವಾಸ ಮೂಡಿರುವುದಕ್ಕೆ ಸಾಕ್ಷಿಯಾಗಿದೆ. ಆದರೆ ಎಟಿಎಂಗಳು ನಿರೀಕ್ಷೆಗಿಂತ ಬೇಗನೆ ಖಾಲಿಯಾಗಿ ಜನರು ಎದುರಿಸುತ್ತಿರುವ ಅನಾನುಕೂಲತೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಅವುಗಳಲ್ಲಿ 100 ರೂ.ನೋಟುಗಳಿಗಾಗಿ ನಿಗದಿತ ಸ್ಥಳಾವಕಾಶವಿದೆ, ಜೊತೆಗೆ ಹೊಸ ನೋಟುಗಳ ಅಳತೆಗಳೂ ಬದಲಾಗಿವೆ. ಎಟಿಎಂನಲ್ಲಿ ನೋಟುಗಳನ್ನು ತುಂಬುವುದಕ್ಕೂ ಮಿತಿಯಿದೆ ಎಂದು ಅವರು ವಿವರಿಸಿದರು.
ಎಟಿಎಂಗಳಲ್ಲಿ ನೋಟುಗಳು ಖಾಲಿಯಾದಾಗಲೆಲ್ಲ ಸಂಬಂಧಿಸಿದ ವ್ಯಕ್ತಿ ಆಗಮಿಸಿ ನೋಟುಗಳನ್ನು ಪುನಃ ತುಂಬಬೇಕಾಗುತ್ತದೆ ಮತ್ತು ಇದು ಹೆಚ್ಚಿನ ಸಮಯವನ್ನು ತಿನ್ನುತ್ತದೆ. ನವಂಬರ್ ಅಂತ್ಯದೊಳಗೆ ಈ ಸಮಸ್ಯೆಯನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಆ ವೇಳೆಗೆ ಗೊಂದಲಗಳು ಕಡಿಮೆಯಾದರೆ ಮುಂಬರುವ ದಿನಗಳಲ್ಲಿ 50 ಮತ್ತು 20 ರೂ.ನೋಟುಗಳ ವಿತರಣೆಯನ್ನು ಆರಂಭಿಸುತ್ತೇವೆ ಎಂದರು.
ತನ್ಮಧ್ಯೆ ಸರಕಾರವು ಎಟಿಎಂಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವಂತಾಗಲು ಅವುಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಆರ್‌ಬಿಐನ ಡೆಪ್ಯೂಟಿ ಗವರ್ನರ್ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆಯೊಂದನ್ನು ರಚಿಸಿದೆ.