ಫ್ರೆಂಚ್ ಪತ್ರಕರ್ತನ ಗಡಿಪಾರುಗೊಳಿಸಿದ ಟರ್ಕಿ
ಪ್ಯಾರಿಸ್,ನವೆಂಬರ್ 15: ಫ್ರೆಂಚ್ ಪತ್ರಕರ್ತರೊಬ್ಬರನ್ನು ಟರ್ಕಿಯಿಂದ ಗಡಿಪಾರುಗೊಳಿಸಲಾಗಿದೆ ಎಂದು ವರದಿಯಾಗಿದೆ. ಸಿರಿಯದ ಗಡಿ ಹತ್ತಿರ ಟರ್ಕಿಯ ಆಗ್ನೇಯ ಪ್ರದೇಶದಲ್ಲಿ ರವಿವಾರ ಬಂಧಿಸಲಾಗಿದ್ದ ಒಲಿವರ್ ಬರ್ಟ್ರಂಡ್ ಎಂಬ ಪತ್ರಕರ್ತರನ್ನು ಟರ್ಕಿ ದೇಶದಿಂದ ಗಡಿಪಾರುಗೊಳಿಸಿದೆ. ಅಧ್ಯಕ್ಷ ರಿಸೆಫ್ ಎರ್ದೊಗಾನ್ ವಿರುದ್ಧ ನಡೆದಿದ್ದ ವಿಫಲ ಸೈನಿಕ ಕ್ಷಿಪ್ರ ಬುಡಮೇಲುಕೃತ್ಯದ ಕುರಿತು ವರದಿ ತಯಾರಿಸುವುದಕ್ಕಾಗಿ ಬರ್ಟ್ರಾಂಡ್ ಟರ್ಕಿಗೆ ಬಂದಿದ್ದರು. ಆದರೆ ಸಂಬಂಧಿಸಿದ ದಾಖಲೆಗಳು ಅವರ ಕೈಯಲ್ಲಿರಲಿಲ್ಲ ಎಂದು ಅವರನ್ನು ಬಂಧಿಸಲಾಗಿದೆ ಎಂದು ಫ್ರೆಂಚ್ ಮಾಧ್ಯಮಗಳು ವರದಿ ಮಾಡಿವೆ. ಟರ್ಕಿಯ ವರ್ತನೆಗೆ ಫ್ರಾನ್ಸ್ ವಿದೇಶ ಸಚಿವ ವಿಷಾದಸೂಚಿಸಿ ಇದು ಅಂಗೀಕರಿಸಲು ಸಾಧ್ಯವಿಲ್ಲದ ಕ್ರಮವೆಂದು ಟೀಕಿಸಿದ್ದಾರೆ. ಟರ್ಕಿ ಸರಕಾರ ಪಾರದರ್ಶಕವೆಂದಾದರೆ ಬರ್ಟ್ರಾಂಡ್‌ರನ್ನು ಪ್ರಜಾಪ್ರಭುತ್ವದೇಶ ಎಂಬ ನೆಲೆಯಲ್ಲಿ ಟರ್ಕಿಯಲ್ಲಿ ಕೆಲಸಮಾಡಲು ಅನುಮತಿಸಬೇಕೆಂದು ವಾಚ್‌ಡಾಗ್ ಗ್ರೂಪ್ ಪ್ರತಿನಿಧಿ ಕ್ರಿಸ್ಟೋಫರ್ ಡಿಲೋರಿ ಹೇಳಿದ್ದಾರೆಂದು ವರದಿ ತಿಳಿಸಿದೆ.