ಮಿಶೆಲ್ ಒಬಾಮಗೆ ಗೇಲಿ ಮಾಡಿದ ಗಣ್ಯ ವ್ಯಕ್ತಿಗಳು
ವಾಶಿಂಗ್ಟನ್, ನ. 15: ಅಮೆರಿಕದ ಪ್ರಥಮ ಮಹಿಳೆ ಮಿಶೆಲ್ ಒಬಾಮ ಬಗ್ಗೆ ವೆಸ್ಟ್ ವರ್ಜೀನಿಯ ರಾಜ್ಯದ ಸಣ್ಣ ಪಟ್ಟಣವೊಂದರ ಮೇಯರ್ ಮತ್ತು ಲಾಭರಹಿತ ಸಂಸ್ಥೆಯೊಂದರ ನಿರ್ದೇಶಕರೊಬ್ಬರು ಜನಾಂಗೀಯ ನಿಂದನೆಯ ಮಾತುಗಳನ್ನಾಡಿರುವುದು ಭಾರೀ ವಿವಾದವೆಬ್ಬಿಸಿದೆ.
‘‘ಶ್ವೇತಭವನಕ್ಕೆ ಶ್ರೇಷ್ಠ, ಸುಂದರ, ಸಂಭಾವಿತ ಪ್ರಥಮ ಮಹಿಳೆಯೊಬ್ಬರು ಮರಳಿರುವುದರಿಂದ ತುಂಬಾ ನಿರಾಳವಾಗಿದ್ದೇನೆ. ಪಾದರಕ್ಷೆ ಹಾಕಿಕೊಂಡು ನಡೆಯುವ ವಾನರನನ್ನು ನೋಡಿ ನೋಡಿ ಸಾಕಾಗಿದೆ’’ ಎಂಬುದಾಗಿ ಕ್ಲೇ ಎಂಬ ಪಟ್ಟಣದಲ್ಲಿರುವ ‘ಕ್ಲೇ ಕೌಂಟಿ ಡವಲಪ್‌ಮೆಂಟ್ ಕಾರ್ಪ್’ನ ನಿರ್ದೇಶಕಿ ಪಮೇಲಾ ರ್ಯಾಮ್‌ಸೇ ಟೇಲರ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆದ್ದ ಬಳಿಕ ಈ ಹೇಳಿಕೆಯನ್ನು ಹಾಕಲಾಗಿದೆ.
ಹಾಲಿ ಪ್ರಥಮ ಮಹಿಳೆ ಮಿಶೆಲ್ ಒಬಾಮರನ್ನು ಗಮನದಲ್ಲಿರಿಸಿಕೊಂಡು ಈ ಹೇಳಿಕೆಯನ್ನು ಹಾಕಲಾಗಿದೆ. ಡೊನಾಲ್ಡ್ ಟ್ರಂಪ್‌ರ ಪತ್ನಿ ಮೆಲಾನಿಯಾ ಟ್ರಂಪ್ ಇನ್ನು ಅಮೆರಿಕದ ಪ್ರಥಮ ಮಹಿಳೆಯಾಗಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ನಗರದ ಮೇಯರ್ ಬೆವರ್ಲಿ ವೇಲಿಂಗ್, ‘‘ಪಮೇಲಾ, ನಿಮ್ಮ ಹೇಳಿಕೆ ತಮಾಷೆಯಾಗಿದೆ’’ ಎಂಬುದಾಗಿ ಬರೆದಿದ್ದಾರೆ ಎಂದು ಎನ್‌ಬಿಸಿ ಟಿವಿಯ ಸಹ ಸಂಸ್ಥೆ ಡಬ್ಲುಎಸ್‌ಎಝಡ್ ವರದಿ ಮಾಡಿದೆ.
ಈ ಹೇಳಿಕೆಗಳನ್ನು ಬಳಿಕ ಡಿಲೀಟ್ ಮಾಡಲಾಗಿದೆಯಾದರೂ, ಅವುಗಳ ಚಿತ್ರಗಳನ್ನು ಸಾಮಜಿಕ ಜಾಲತಾಣಗಳಲ್ಲಿ ಭಾರೀ ಪ್ರಮಾಣದಲ್ಲಿ ಹಂಚಿಕೊಳ್ಳಲಾಗಿದೆ. ಜನಾಂಗೀಯ ನಿಂದನೆಗೈದ ಈ ಇಬ್ಬರೂ ಮಹಿಳೆಯರನ್ನು ವಜಾಗೊಳಿಸಬೇಕು ಎಂಬುದಾಗಿ ಆಗ್ರಹಿಸುವ ಆನ್‌ಲೈನ್ ಮನವಿಗೆ ಸೋಮವಾರ ಮಧ್ಯಾಹ್ಯದವರೆಗೆ 14,000ಕ್ಕೂ ಅಧಿಕ ಸಹಿಗಳು ಬಿದ್ದಿವೆ.
ಈ ಇಬ್ಬರೂ ಮಹಿಳೆಯರು ತಮ್ಮ ದುರಭಿರುಚಿಯ ಹೇಳಿಕೆಗಳಿಗಾಗಿ ಕ್ಷಮೆ ಕೋರಿದ್ದಾರೆ. ಕ್ಲೇ ಕೌಂಟಿಯ ಹತ್ತನೇ ಎರಡು ಭಾಗ ಜನರು ಆಫ್ರಿಕನ್ ಅಮೆರಿಕನ್ನರು. ಅಲ್ಲಿನ ಮುಕ್ಕಾಲು ಭಾಗಕ್ಕೂ ಅಧಿಕ ಮತಗಳು ಟ್ರಂಪ್ ಪರವಾಗಿ ಚಲಾವಣೆಯಾಗಿವೆ.