ಬುರ್ಖಾ ನಿಷೇಧ ಆಗ್ರಹಿಸಿದ್ದ ಪಿಐಎಲ್ ವಜಾ
ಹೊಸದಿಲ್ಲಿ, ನ.15: ಬುರ್ಖಾ ಹಾಗೂ ಇತರ ಬಗೆಯ ಮುಖಪರದೆ ನಿಷೇಧಿಸುವಂತೆ ಸೂಚಿಸಬೇಕು ಎಂದು ಆಗ್ರಹಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ದಿಲ್ಲಿ ಹೈಕೋರ್ಟ್ ನಿರಾಕರಿಸಿದೆ. ಭದ್ರತಾ ಕಾರಣಗಳಿಗಾಗಿ ರಾಜಧಾನಿಯ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಿಸಬೇಕು ಎಂದು ಆಗ್ರಹಿಸಿದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಇದರಲ್ಲಿ ಯಾವ ಸಾರ್ವಜನಿಕ ಹಿತಾಸಕ್ತಿಯ ವಿಷಯವೂ ಅಡಗಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಜಿ.ರೋಹಿಣಿ ಹಾಗೂ ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್ ಅವರನ್ನೊಳಗೊಂಡ ನ್ಯಾಯಪೀಠ, ಅರ್ಜಿಯನ್ನು ತಿರಸ್ಕರಿಸಿದೆ.
ಈ ರಿಟ್ ಅರ್ಜಿಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಇದನ್ನು ತಿರಸ್ಕರಿಸಲಾಗುತ್ತದೆ. ಇದು ಪರಿಗಣಿಸಲು ಯೋಗ್ಯವಾದ ಅರ್ಜಿಯಲ್ಲ. ಇದರಲ್ಲಿ ಯಾವ ಸಾರ್ವಜನಿಕ ಹಿತಾಸಕ್ತಿಯೂ ಒಳಗೊಂಡಿಲ್ಲ ಎಂದು ಹೇಳಿದೆ.
ಬುರ್ಖಾ, ಹೆಲ್ಮೆಟ್ ಮತ್ತು ಇತರ ಮುಖಪರದೆಗಳನ್ನು ಸಾರ್ವಜನಿಕ ಸ್ಥಳಗಳು, ಸಾರಿಗೆ, ಸರಕಾರಿ ಕಚೇರಿ ಹಾಗೂ ಪಾರಂಪರಿಕ ತಾಣಗಳಲ್ಲಿ ನಿಷೇಧಿಸಬೇಕು. ಏಕೆಂದರೆ ಇದರಿಂದ ಭಯೋತ್ಪಾದಕ ಚಟುವಟಿಕೆಯ ಅಪಾಯ ಇದೆ ಎಂದು ಅರ್ಜಿ ವಾದಿಸಿತ್ತು.
..