×
Ad

ಹಳೆ ನೋಟು ಬದಲಾಯಿಸುವವರು ಗುರುತಿನ ಚೀಟಿಯ ಪ್ರತಿ ತರಬೇಕಾಗಿಲ್ಲ : ರಿಸರ್ವ್ ಬ್ಯಾಂಕ್

Update: 2016-11-16 09:01 IST

ಹೊಸದಿಲ್ಲಿ, ನ.16: ಹಳೆನೋಟು ಬದಲಾಯಿಸಿಕೊಳ್ಳುವ ವೇಳೆ ಗ್ರಾಹಕರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯನ್ನು ಸಂಗ್ರಹಿಸುವಂತೆ ಭಾರತೀಯ ರಿಸ ಬ್ಯಾಂಕ್ ಅಥವಾ ಯಾವುದೇ ಬ್ಯಾಂಕುಗಳ ಮುಖ್ಯಸ್ಥರು ಬ್ಯಾಂಕ್ ಸಿಬ್ಬಂದಿಗೆ ಸೂಚನೆ ನೀಡಿರಲಿಲ್ಲ ಎಂಬ ಅಂಶ ಇದೀಗ ಬಹಿರಂಗವಾಗಿದೆ.

ಗ್ರಾಹಕರು ಕೇವಲ ಅಧಿಕೃತ ಪುರಾವೆಗಳನ್ನು ಪ್ರದರ್ಶಿಸಿ ಹಣ ವಿನಿಮಯ ಮಾಡಿಕೊಳ್ಳಬಹುದು. ಜೆರಾಕ್ಸ್ ಪ್ರತಿ ನೀಡುವ ಅಗತ್ಯವಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾ ಇ-ಮೇಲ್ ಮೂಲಕ ಆರ್ ಬಿಐ ಸ್ಪಷ್ಟನೆ ಕೇಳಿದಾಗ ಸ್ಪಷ್ಟಪಡಿಸಿದೆ. ಇದೇ ಅಭಿಪ್ರಾಯವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಕೂಡಾ ದೃಢಪಡಿಸಿದ್ದಾರೆ. ಗ್ರಾಹಕರು ವಿನಿಮಯಕ್ಕೆ ನೀಡುವ ಮನವಿಯಲ್ಲಿ ಗುರುತಿನ ಚೀಟಿ ವಿವರಗಳನ್ನು ನಮೂದಿಸಿರಬೇಕು. ಹಣ ನೀಡುವಾಗ ಇದನ್ನು ಖಾತ್ರಿಪಡಿಸಲಾಗುತ್ತದೆಯೇ ವಿನಃ ಜೆರಾಕ್ಸ್ ಪ್ರತಿ ಪಡೆಯಬೇಕಿಲ್ಲ ಎಂದು ವಿವರಿಸಿದ್ದಾರೆ.

ಆದರೆ ಹಲವು ಬ್ಯಾಂಕುಗಳಲ್ಲಿ ಜೆರಾಕ್ಸ್ ಪ್ರತಿಗಳನ್ನು ಪಡೆಯಲಾಗುತ್ತಿದೆ. ಆದರೆ ಈ ಸಂಬಂಧ ಕೇಂದ್ರ ಹೊರಡಿಸಿದ ಅಧಿಸೂಚನೆಯಲ್ಲಿ ಕೂಡಾ ಗ್ರಾಹಕರು ಯಾವುದೇ ಬ್ಯಾಂಕುಗಳಲ್ಲಿ ನಿಗದಿತ ನಮೂನೆಯಲ್ಲಿ ಮನವಿ ಸಲ್ಲಿಸಿ, ಗುರುತಿನ ಚೀಟಿಯನ್ನು ತೋರಿಸಿ ಹಳೆ ನೋಟು ವಿನಿಮಯ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News