ಭಾರತದ ಕಾನೂನು ಆಯೋಗದ ಅಧ್ಯಕ್ಷರು ಹೇಳಿದ್ದೇನು?
ಹೊಸದಿಲ್ಲಿ, ನ.16: ಸಮಾನ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಭಾರತದ ಕಾನೂನು ಆಯೋಗ ಬಿಡುಗಡೆ ಮಾಡಿರುವ ಪ್ರಶ್ನಾವಳಿ ಸುತ್ತ ಎದ್ದಿರುವ ವಿವಾದಕ್ಕೆ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ. ಸಮಾನ ನಾಗರಿಕ ಸಂಹಿತೆ ಹೇರಲು ಶಿಫಾರಸು ಮಾಡುವುದು ಆಯೋಗದ ಉದ್ದೇಶವಲ್ಲ. ಆದರೆ ಎಲ್ಲ ಧರ್ಮಗಳ ಕುಟುಂಬ ಕಾನೂನುಗಳಲ್ಲಿ ಸುಧಾರಣೆ ತರುವಂತೆ ಶಿಫಾರಸು ಮಾಡುವುದು ಮುಖ್ಯ ಗುರಿ. ಅದರಲ್ಲೂ ಮುಖ್ಯವಾಗಿ ಲಿಂಗ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಕ್ಕೆ ಮುಂದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
"ಎಲ್ಲ ಧರ್ಮಗಳ ಕುಟುಂಬ ಕಾನೂನುಗಳ ಸುಧಾರಣೆಗೆ ನಾವು ಮುಂದಾಗಿದ್ದೇವೆ. ಸಮಾನ ನಾಗರಿಕ ಸಂಹಿತೆ ಬಗ್ಗೆ ನಾವು ಯೋಚಿಸುತ್ತಿಲ್ಲ. ಜನ ಇದನ್ನು ಎಲ್ಲರಿಗೂ ಒಂದೇ ಕಾನೂನು ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ವಿವಾಹ ಅಧಿಕೃತವಾಗಬೇಕಾದರೆ ಎಲ್ಲರೂ ಹಿಂದೂ ಸಂಪ್ರದಾಯವಾದ ಸಪ್ತಪದಿ ತುಳಿಯಬೇಕು ಎಂಬ ಅರ್ಥವಲ್ಲ" ಎಂದು ಹೇಳಿದ್ದಾರೆ.
"ಮೈತ್ರಿ ಕರಾರು, ನಾಥ ಪ್ರಾಥ ಹಾಗೂ ಬಹುಪತಿತ್ವದಂಥ ಲಿಂಗ ತಾರತಮ್ಯ ಆಚರಣೆಗಳು ಹಿಂದೂ ಸಂಪ್ರದಾಯದಲ್ಲಿದ್ದು, ಅದನ್ನೂ ಪರಿಶೀಲಿಸಲಾಗುವುದು ಎಂದು ಚೌಹಾಣ್ ಪ್ರಕಟಿಸಿದರು.
ಮೈತ್ರಿ ಕರಾರಿನ ಅನ್ವಯ ವಿವಾಹಿತ ವ್ಯಕ್ತಿ, ಸ್ನೇಹ ಒಪ್ಪಂದ ಮಾಡಿಕೊಂಡು, ಪತ್ನಿಯ ಹೊರತಾಗಿ ಬೇರೆ ಮಹಿಳೆ ಜತೆ ವಾಸಿಸಲು ಅವಕಾಶವಿದೆ. ಅಂತೆಯೇ ನಾಥಪ್ರಾಥದಂಥ ಆಚರಣೆಗಳು ರಾಜಸ್ಥಾನದಲ್ಲಿದ್ದು, ಪತ್ನಿಯ ಮಾರಾಟಕ್ಕೆ ಅವಕಾಶವಿದೆ.
"ಶರಿಯತ್ ನಲ್ಲಿ ಉಲ್ಲೇಖಿಸಿರುವ ತ್ರಿವಳಿ ತಲಾಖ್ ಗೆ ಆಯೋಗದ ವಿರೋಧವಿಲ್ಲ. ಆದರೆ ದಿಢೀರನೇ ಮೂರು ಬಾರಿ ತಲಾಖ್ ಹೇಳುವ ಕ್ರಮಕ್ಕೆ ನಮ್ಮ ವಿರೋಧವಿದೆ" ಎಂದರು. ಇದಕ್ಕೆ ತಲಾಕ್ ಇ ಬಿದಅತ್ ಎನ್ನಲಾಗುತ್ತದೆ. ಶಾಹ್ ಬಾನು ನೀಡಿದ ಇಂಥ ದೂರು ಇದೀಗ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ.