ನವೆಂಬರ್ 24 ರೊಳಗೆ ಬ್ಯಾಂಕ್ ನಲ್ಲಿ ಜಮೆಯಾಗಲಿರುವ ಮೊತ್ತ ಊಹಿಸಬಲ್ಲಿರಾ ?
ಹೊಸದಿಲ್ಲಿ, ನ.16: ದೇಶದಲ್ಲಿ ಮಂಗಳವಾರದವರೆಗೆ 3.75 ಲಕ್ಷ ಕೋಟಿ ರೂಪಾಯಿ ಮೌಲ್ಯದ 500 ಹಾಗೂ 1000 ರೂಪಾಯಿ ನೋಟುಗಳು ಬ್ಯಾಂಕ್ ಗಳಲ್ಲಿ ಠೇವಣಿಯಾಗಿದ್ದು, ಆಸ್ಪತ್ರೆ, ಪೆಟ್ರೋಲ್ ಬಂಕ್ ಮತ್ತಿತರ ಕಡೆಗಳಲ್ಲಿ ಹಳೆ ನೋಟುಗಳ ಬಳಕೆಯನ್ನು ಮುಂದುವರಿಸಲು ಅವಕಾಶ ನೀಡಲಾದ ನವೆಂಬರ್ 24ರ ವೇಳೆಗೆ 10 ಲಕ್ಷ ಕೋಟಿ ತಲುಪುವ ನಿರೀಕ್ಷೆ ಇದೆ.
ಈ ವಿನಾಯಿತಿ ಮತ್ತಷ್ಟು ವಿಸ್ತರಿಸಿದರೆ, ಇದು 12 ಲಕ್ಷ ಕೋಟಿಗೆ ಏರುವ ನಿರೀಕ್ಷೆ ಇದೆ ಎಂದು ಉನ್ನತ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕಪ್ಪುಹಣಕ್ಕೆ ಕಡಿವಾಣ ಹಾಕುವ ಪ್ರಯತ್ನವಾಗಿ, ನರೇಂದ್ರ ಮೋದಿ, ನವೆಂಬರ್ 8ರಂದು 500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳ ಚಲಾವಣೆಯನ್ನು ತಕ್ಷಣದಿಂದ ನಿಷೇಧಿಸುವ ನಿರ್ಧಾರ ಪ್ರಕಟಿಸಿದ್ದರು. ದೇಶದಲ್ಲಿ ಸುಮಾರು 18 ಲಕ್ಷ ಕೋಟಿ ರೂಪಾಯಿ ಚಲಾವಣೆಯಲ್ಲಿದ್ದು, 500 ಹಾಗೂ 1000 ರೂಪಾಯಿ ನೋಟುಗಳ ಪ್ರಮಾಣ ಶೇಕಡ 84-85 ಇರಬಹುದು. 2017ರ ಮಾರ್ಚ್ ವೇಳೆಗೆ ಇದು 16.6 ಲಕ್ಷ ಕೋಟಿ ಆಗುವ ನಿರೀಕ್ಷೆ ಇದೆ ಎಂದು ಆರ್ ಬಿಐ ಅಂದಾಜು ಮಾಡಿದೆ.
ಇದೀಗ ಸರಕಾರ, ಹೊಸ ನೋಟುಗಳು ಮೂಲೆಮೂಲೆಗೂ ಬೇಡಿಕೆಗೆ ಅನುಗುಣವಾಗಿ ತಲುಪುವಂತೆ ಮಾಡಲು ಹರಸಾಹಸ ಮಾಡುತ್ತಿದೆ.