ಮದುವೆಯಲ್ಲಿ ಹಿಂದೂ ಮಹಾಸಭಾ ನಾಯಕಿಯಿಂದ ಗುಂಡು ಹಾರಾಟ, ವರನ ಚಿಕ್ಕಮ್ಮ ಬಲಿ
ಚಂಡೀಗಢ, ನ.14 : ಹರ್ಯಾಣದ ಕರ್ನಲ್ ಗ್ರಾಮದಲ್ಲಿ ಮಂಗಳವಾರ ನಡೆದ ವಿವಾಹವೊಂದರಲ್ಲಿ ಹಿಂದೂ ಮಹಾಸಭಾ ನಾಯಕಿ, ಸ್ವಯಂಘೋಷಿತ ದೇವಮಹಿಳೆ ಮತ್ತಾಕೆಯ ಖಾಸಗಿ ಅಂಗರಕ್ಷಕರು ಅನಿಯಂತ್ರಿತ ಗುಂಡು ಹಾರಾಟ ನಡೆಸಿದ ಪರಿಣಾಮ ವರನ ಚಿಕ್ಕಮ್ಮ ಬಲಿಯಾದರೆ, ಮೂವರು ಇತರ ಸಂಬಂಧಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಿಲ್ಲಿಯಿಂದ 120 ಕಿಮೀ ದೂರದಲ್ಲಿರುವ ಪಟ್ಟಣದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ಅತಿಥಿಯಾಗಿ ಆಗಮಿಸಿದ್ದ ಸಾಧ್ವಿ ದೇವಾ ಠಾಕುರ್ ಸಂತೋಷಾಚರಣೆಗೆ ಗುಂಡು ಹಾರಿಸಿದ್ದು ಆಕೆಯ ಜತೆಗೆ ಆಗಮಿಸಿದ್ದ ಒಂದು ಡಜನಿಗೂ ಅಧಿಕ ಪುರುಷರು ಕೂಡ ಗುಂಡು ಹಾರಾಟ ನಡೆಸಿದ್ದಾರೆ.
ಅಲ್ಲಿ ನೃತ್ಯ ನಡೆಸುತ್ತಿರುವವರನ್ನು ಗುರಿಯಾಗಿಸಿ ಈ ಗುಂಡಿನ ಹಾರಾಟ ನಡೆದಿದ್ದು ವರನ ಚಿಕ್ಕಮ್ಮ ನೆಲಕ್ಕುರುಳುತ್ತಿದ್ದಂತೆಯೇ ಸಾಧ್ವಿ ಹಾಗೂ ಆಕೆಯ ಸಂಗಡಿಗರು ಪರಾರಿಯಾದರು.
ಘಟನೆ ನಡೆದ ಕರ್ನಲ್ ಪಟ್ಟಣವು ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ತವರು ಕ್ಷೇತ್ರವಾಗಿದೆ. ಕೇಸರಿ ಧಿರಿಸು ಧರಿಸಿದ್ದ ಹಾಗೂ ತಲೆಗೆ ರುಮಾಲು ಸುತ್ತಿದ್ದ ಸ್ವಯಂಘೋಷಿತ ದೇವಮಹಿಳೆ ಹಲವಾರು ಚಿನ್ನದ ಆಭರಣಗಳನ್ನೂ ಧರಿಸಿದ್ದಳು. ಬಂದೂಕುಗಳು ಈ ವಿಲಾಸಿ ಜೀವನ ನಡೆಸುತ್ತಿರುವ ದೇವಮಹಿಳೆಗೆ ಇಷ್ಟವೆಂದು ಹೇಳಲಾಗುತ್ತಿದೆ.